ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಕರ್ನಾಟಕ ರಾಜ್ಯೋತ್ಸವ: ಕುಣಿದು ಕುಪ್ಪಳಿಸಿದ ಯುವಜನತೆ - ಕರ್ನಾಟಕ ರಾಜ್ಯೋತ್ಸವ
Published : Nov 1, 2023, 11:32 AM IST
ಬೆಳಗಾವಿ:ಇಂದು ರಾಜ್ಯಾದ್ಯಂತ 68ನೇ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ರಾಜ್ಯದ ವಿವಿಧೆಡೆ ಬೆಳಿಗ್ಗೆ ರಾಜ್ಯೋತ್ಸವ ಆಚರಿಸಲಾಗಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಧ್ಯರಾತ್ರಿಯಿಂದಲೇ ರಾಜ್ಯೋತ್ಸವದ ಸಂಭ್ರಮ ಶುರುವಾಗಿತ್ತು.
ರಾಣಿ ಚನ್ನಮ್ಮ ವೃತ್ತದಲ್ಲಿ 12 ಗಂಟೆಗೂ ಮೊದಲೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಕೈಯಲ್ಲಿ ಕನ್ನಡ ಬಾವುಟ ಹಿಡಿದು ಕುಣಿದು ಕುಪ್ಪಳಿಸಿದರು. ವಿದ್ಯುತ್ ದೀಪಗಳು, ಕನ್ನಡ ಬಾವುಟಗಳಿಂದ ಝಗಮಗಿಸುತ್ತಿದ್ದ ಚನ್ನಮ್ಮ ವೃತ್ತದಲ್ಲಿ ಹಬ್ಬದ ವಾತಾವರಣ ಕಂಡುಬಂತು. 12 ಗಂಟೆಯಾಗುತ್ತಲೇ ಕೇಕ್ ಕತ್ತರಿಸಿದ ಯುವಕರು ಸಂಭ್ರಮಾಚರಣೆಗೆ ಚಾಲನೆ ನೀಡಿದರು.
ಬಳಿಕ ಯುವಕ, ಯುವತಿಯರು ಕನ್ನಡ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಚನ್ನಮ್ಮ ವೃತ್ತದಲ್ಲಿ ಕಣ್ಣು ಹಾಯಿಸದಲ್ಲೆಲ್ಲಾ ಜನರಿಂದ ತುಂಬಿ ಹೋಗಿತ್ತು. ಎಲ್ಲೆಡೆ ಕನ್ನಡ ಬಾವುಟಗಳು ರಾರಾಜಿಸುತ್ತಿದ್ದವು. ಇಂದು ಕರ್ನಾಟಕ ರಾಜ್ಯೋತ್ಸವದ ಭವ್ಯ ಮೆರವಣಿಗೆ ನಡೆಯಲಿದ್ದು, ಸಾವಿರಾರು ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕನ್ನಡ ನಾಡು, ನುಡಿ ಕುರಿತ ನೂರಕ್ಕೂ ಅಧಿಕ ರೂಪಕಗಳು ಎಲ್ಲರ ಗಮನ ಸೆಳೆಯಲಿವೆ. 68ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದರು.
ಇದನ್ನೂ ಓದಿ:'ಕರ್ನಾಟಕ'ಕ್ಕೆ 50 ತುಂಬಿದ ಹರುಷ: ಬಿಬಿಎಂಪಿಯಿಂದ ವಿಶೇಷ ರೀತಿಯಲ್ಲಿ ರಾಜ್ಯೋತ್ಸವ ಆಚರಣೆ