ಖರ್ಗೆ, ರಾಹುಲ್ ಬಳಿಕ ಸುರ್ಜೇವಾಲ ನಿವಾಸದಲ್ಲಿ ಡಿಕೆಶಿ ಸಭೆ: ವಿಡಿಯೋ
ನವದೆಹಲಿ:ಕರ್ನಾಟಕದ ಮುಂದಿನ ಸಿಎಂ ಆಯ್ಕೆ ಕಗ್ಗಂಟು ಇಂದು ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಬೆಳಗ್ಗೆಯಿಂದ ಹೈಕಮಾಂಡ್ ಮಟ್ಟದಲ್ಲಿ ಸಭೆಗಳು ನಡೆಯುತ್ತಿದ್ದರೂ ಯಾವುದೇ ಪ್ರತಿಫಲ ಸಿಕ್ಕಿಲ್ಲ. ಇದೀಗ ಡಿಕೆ ಶಿವಕುಮಾರ್ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರ ನಿವಾಸಕ್ಕೆ ತೆರಳಿದ್ದು, ಮಾತುಕತೆ ನಡೆಸುತ್ತಿದ್ದಾರೆ.
ಇದೇ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಲು ನಿರಾಕರಿಸಿದ ಡಿಕೆ ಶಿವಕುಮಾರ್, ಯಾರದ್ದೋ ಮಾತು ಕೇಳಿಕೊಂಡು ಸುಳ್ಳು ಸುದ್ದಿಗಳನ್ನು ಭಿತ್ತರಿಸುತ್ತಿದ್ದೀರಿ. ನಿಮಗೆ ಏನು ಬೇಕೋ ಅದನ್ನು ಮಾಡಿ ಎಂದು ತುಸು ಬೇಜಾರಿನಿಂದಲೇ ಅವರು ಹೇಳಿದರು. ಇಷ್ಟಾದರೂ ಮಾಧ್ಯಮಗಳ ಯಾವುದೇ ಪ್ರಶ್ನೆಗಳಿಗೆ ಅವರು ಉತ್ತರ ನೀಡದೇ ಸಸ್ಪೆನ್ಸ್ ಮುಂದುವರಿಸಿದ್ದಾರೆ.
ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಅವರ ಬೆಂಬಲಿಗರು ಕೂಡ ಲಾಬಿ ನಡೆಸುತ್ತಿದ್ದಾರೆ. ಎಂ ಬಿ ಪಾಟೀಲ್ ಅವರು ಕೂಡ ದೆಹಲಿಗೆ ಆಗಮಿಸಿದ್ದು, ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವಂತೆ ನಾಯಕರ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ.
ಇನ್ನು, ಮಂಗಳವಾರ ಇಡೀ ದಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ನಿವಾಸದಲ್ಲಿ ಸಿಎಂ ಪ್ರಬಲ ಆಕಾಂಕ್ಷಿಗಳ ಮಧ್ಯೆ ಸಭೆ ನಡೆಸಲಾಗಿತ್ತು. ಇಂದು ಬೆಳಗ್ಗೆ ರಾಹುಲ್ ಗಾಂಧಿ ಅವರು ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರೂ ಆಯ್ಕೆ ಬಿಕ್ಕಟ್ಟು ಬಗೆಹರಿದಿಲ್ಲ.
ಇದನ್ನೂ ಓದಿ:ಇನ್ನೂ ಬಿಚ್ಚಿಕೊಳ್ಳದ ಕಾಂಗ್ರೆಸ್ ಸಿಎಂ ಆಯ್ಕೆ ಕಗ್ಗಂಟು: ದೆಹಲಿಯಲ್ಲಿ ಮುಂದುವರಿದ ಕಸರತ್ತು