ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ, ಕನ್ನಡ ಶಾಲೆ ಉಳಿಸಬೇಕಿದೆ: ಹೊರಟ್ಟಿ - ETV Bharat Kannada News
ಕೊಪ್ಪಳ : "ಕನ್ನಡ ಶಾಲೆಗಳ ಬಗ್ಗೆ ಪಾಲಕರು ನಿರಾಸಕ್ತಿ ತೋರುತ್ತಿದ್ದಾರೆ. ಕಾನ್ವೆಂಟ್ ವ್ಯಾಮೋಹಕ್ಕೊಳಗಾಗದೇ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿ ಕನ್ನಡ ಶಾಲೆಗಳನ್ನು ಉಳಿಸಬೇಕಿದೆ" ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಕೊಪ್ಪಳದಲ್ಲಿ ಮಾತನಾಡಿದ ಅವರು, "ಶಾಸಕರು ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ, ಬಹುತೇಕ ಶಾಸಕರು ಸರಕಾರದ ಸುತ್ತೋಲೆಯನ್ನು ನಿರ್ಲಕ್ಷಿಸುತ್ತಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು. "ಸರ್ಕಾರ ಕನ್ನಡ ಶಾಲೆಗಳಿಗೆ ಏನೂ ಕೊಟ್ಟಿಲ್ಲ ಅಂದ್ರೂ ಪರವಾಗಿಲ್ಲ. ಆದರೆ, ಎಲ್ಲ ಸರ್ಕಾರಿ ಶಾಲೆಯಲ್ಲಿ ಪ್ರತಿ ತರಗತಿಗೂ ಒಬ್ಬ ಶಿಕ್ಷಕನನ್ನು ಕೊಡಬೇಕು" ಎಂದು ಸಲಹೆ ನೀಡಿದರು.
"ಸರಕಾರಿ ಶಾಲೆಗಳು ಉಳಿಯಬೇಕೆಂದರೆ ಪ್ರತಿವರ್ಷ ಶಿಕ್ಷಕರ ನೇಮಕಾತಿಯಾಗಬೇಕು. ನೇಮಕಾತಿಯಲ್ಲಿ ಈಗಿರುವ ನಿಯಮ ಬದಲಾಯಿಸಬೇಕು. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕನ್ನಡ ಶಾಲೆಗಳತ್ತ ಮಕ್ಕಳು ಮುಖ ಮಾಡಿದ್ದಾರೆ. ಸರ್ಕಾರಿ ನೌಕರರು ಅವರ ಮಕ್ಕಳನ್ನು ಸರಕಾರಿ ಶಾಲಾ-ಕಾಲೇಜುಗಳಲ್ಲಿ ಓದಿಸಬೇಕು ಎಂಬ ಕಾನೂನು ತರಬೇಕು" ಎಂದು ಹೊರಟ್ಟಿ ಅಭಿಪ್ರಾಯಪಟ್ಟರು.
"ಶಾಸಕರಿಗೆ ಸರಕಾರ 2 ಕೋಟಿ ರೂಪಾಯಿ ಅನುದಾನ ನೀಡಿದ್ದು, ಅವರು ಜನರಿಂದ ಆಯ್ಕೆಯಾಗಿರುವುದರಿಂದ ಬೇರೆ ಬೇರೆ ಕಾರ್ಯಕ್ಕೆ ಅದನ್ನು ಬಳಸುತ್ತಿದ್ದಾರೆ. ಶಾಸಕರು ಬೇರೆ ಮೂಲಗಳಿಂದ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು" ಎಂದರು. "ಈಗ ಕಾಲ ಬದಲಾಗಿದೆ. ಕೇರಳ ಸರಕಾರ ಮುಟ್ಟಿನ ರಜೆ ನೀಡಿದೆ. ಕೇರಳ ಸರಕಾರದ ಈ ನಿರ್ಧಾರವನ್ನು ನಾವು ವಿಮರ್ಶಿಸಬೇಕು" ಎಂದರು.
ಇದನ್ನೂ ಓದಿ:ಕೊಪ್ಪಳ ಜಾತ್ರೆಯಲ್ಲಿ ಗಮನಸೆಳೆದ ಪಾರಂಪರಿಕ ಕೃಷಿ ಪರಿಕರಗಳ ಪ್ರದರ್ಶನ