ಹಕ್ಕು ಚಲಾಯಿಸಿದ ಕಿಚ್ಚ.. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವಂತೆ ಸುದೀಪ್ ಮನವಿ: ವಿಡಿಯೋ - Kannada actor Kiccha Sudeep
ಬೆಂಗಳೂರು:ಸ್ಯಾಂಡಲ್ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬೆಂಗಳೂರಿನ ಮತಗಟ್ಟೆಯಲ್ಲಿ ಇಂದು ಮತದಾನ ಮಾಡಿದರು. ಬಳಿಕ ಎಲ್ಲರೂ ಮತ ಹಾಕಲು ಮನವಿ ಮಾಡಿದರು.
ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನೇ ಮನಸ್ತಾಪವಿದ್ದರೂ ಅದು ಅವರಿಗೆ ಬಿಟ್ಟಿದ್ದು. ನನಗೆ ನನ್ನದೇ ಆದ ಸಮಸ್ಯೆಗಳಿವೆ. ನಾನು ಯಾರ ಪರ, ವಿರುದ್ಧವಿಲ್ಲ. ನಮಗಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಮತದಾನ ಮಾಡಬೇಕು. ನಾನು ಇಲ್ಲಿ ಸೆಲೆಬ್ರಿಟಿಯಾಗಿ ಬಂದಿಲ್ಲ. ಭಾರತೀಯನಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ಇದು ನನ್ನ ಜವಾಬ್ದಾರಿಯೂ ಹೌದು ಎಂದು ಹೇಳಿದರು.
ಎಲ್ಲರೂ ಮತದಾನ ಮಾಡಿ. ಆ ಬಳಿಕವಷ್ಟೇ ನಾವು ಪ್ರಶ್ನಿಸುವ ಅಧಿಕಾರ ಪಡೆಯುತ್ತೇವೆ. ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾದರೂ ನಾವು ಮತಕೇಂದ್ರಕ್ಕೆ ಬಂದು ನಮ್ಮ ಹಕ್ಕನ್ನು ಚಲಾವಣೆ ಮಾಡಬೇಕಿದೆ ಎಂದು ಕಿಚ್ಚ ಅಭಿಪ್ರಾಯಪಟ್ಟರು.
ಉರಿಬಿಸಿಲಲ್ಲೂ ಜನ ಕ್ಯಾಂಪೇನ್ಗೆ ಬಂದಿದ್ರು, ಮತದಾನಕ್ಕೂ ಅದೇ ರೀತಿ ಬರಲಿ. ಉತ್ತರ ಕರ್ನಾಟಕ ಪ್ರಚಾರ ವೇಳೆ ಸಾಕಷ್ಟು ಸಮಸ್ಯೆಗಳನ್ನ ಕಂಡೆ. ಅವೆಲ್ಲವೂ ಈಡೇರಬೇಕಿದೆ. ಗೆದ್ದವರು ಅವುಗಳನ್ನು ಈಡೇರಿಸಬೇಕಿದೆ. ಗೆದ್ದವರು ಕೆಲಸ ಮಾಡದಿದ್ದಾಗ ಆ ಸ್ಥಳಕ್ಕೆ ಹೋಗಿ ಮೈಕ್ನಲ್ಲಿ ಕೂಗಿ ಹೇಳುತ್ತೇನೆ. ನಾನು ಯಾವುದಕ್ಕೂ ಹಿಂದೇಟು ಹಾಕುವುದಿಲ್ಲ ಎಂದು ಹೇಳಿದರು.
ಹಣ, ಹೆಂಡ ತೆಗೆದುಕೊಳ್ಳುವವರು ಇರುವವರೆಗೆ ಕೊಡೋರು ಇರ್ತಾರೆ. ಮೊದಲು ತಗೊಳ್ಳೋರು ಸರಿಯಾಗಬೇಕು. ನಮ್ಮಲ್ಲಿ ತಪ್ಪು ಇಟ್ಟುಕೊಂಡು ಬೇರೆಯವರನ್ನು ದೂರಬಾರದು ಎಂದು ಜನರ ಆಮಿಷಗಳಿಗೆ ಕೈಯೊಡ್ಡುವ ಕೆಲ ಮತದಾರರಿಗೆ ನಡೆಯನ್ನು ಟೀಕಿಸಿದರು.