ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಕೆ.ಹೆಚ್.ಮುನಿಯಪ್ಪಗೆ ಅದ್ಧೂರಿ ಸ್ವಾಗತ - devanahalli airport
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೀಸಲು ವಿಧಾನಸಭಾ ಕ್ಷೇತ್ರ ದೇವನಹಳ್ಳಿ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕೆ.ಹೆಚ್.ಮುನಿಯಪ್ಪ ಆಯ್ಕೆಯಾಗಿದ್ದಾರೆ. ಮುನಿಯಪ್ಪ ಹೆಸರು ಪ್ರಕಟಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ ಬ್ಲಾಕ್ ಕಾಂಗ್ರೆಸ್ ನಾಯಕರು, ದೇವನಹಳ್ಳಿ ಮತ್ತು ವಿಜಯಪುರ ಪುರಸಭೆಗಳ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಅಸಮಾಧಾನ ಹೊರಹಾಕಿದ್ದರು. ಇದೀಗ, ಮುನಿಯಪ್ಪ ಹೆಸರನ್ನೇ ಕಾಂಗ್ರೆಸ್ ಅಂತಿಮಗೊಳಿಸಿದೆ.
ದೆಹಲಿಗೆ ತೆರಳಿದ್ದ ಮುನಿಯಪ್ಪ, ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟವಾಗುತ್ತಿದ್ದಂತೆ ನಿನ್ನೆ ಸಂಜೆ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ಸಂದರ್ಭದಲ್ಲಿ ಅಭಿಮಾನಿಗಳು ನೆಚ್ಚಿನ ನಾಯಕನಿಗೆ ಹೂಗುಚ್ಛ ನೀಡಿ, ಮೈಸೂರು ಪೇಟ ಧರಿಸಿ ಅದ್ಧೂರಿಯಾಗಿ ಬರಮಾಡಿಕೊಂಡರು.
ಬಳಿಕ ಮಾತನಾಡಿದ ಮುನಿಯಪ್ಪ, ಹೆಸರು ಪ್ರಕಟಿಸಿದ ಹೈಕಮಾಂಡ್ ನಾಯಕರಿಗೆ ಧನ್ಯವಾದ ಅರ್ಪಿಸಿದರು. "ಸ್ಥಳೀಯ ನಾಯಕರ ಜೊತೆ ಮಾತನಾಡಿ, ಒಗ್ಗಟ್ಟಾಗಿ ದುಡಿದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ನಾನು ಕೇಂದ್ರದಲ್ಲಿ 30 ವರ್ಷ ಅಧಿಕಾರ ನಡೆಸಿದ್ದೇನೆ. ಆದ್ರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹೈಕಮಾಂಡ್ ನನಗೆ ಚುನಾವಣೆಗೆ ನಿಲ್ಲುವಂತೆ ಸೂಚಿಸಿದೆ. ಹೀಗಾಗಿ, ದೇವನಹಳ್ಳಿಯಲ್ಲಿ ನಿಲ್ಲುತ್ತೇನೆ" ಎಂದರು.
ಇದನ್ನೂ ಓದಿ:ತುಮಕೂರು ಜಿಲ್ಲೆಯ 8 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮ: ಗರಿಗೆದರಿದ ರಾಜಕೀಯ ಚಟುವಟಿಕೆ