NEET: ಎನ್‌ಸಿಆರ್‌ಟಿ ಪುಸ್ತಕ ಸರಿಯಾಗಿ ಓದಿದರೆ ಸಾಕು ಟಾಪರ್ ಆಗಬಹುದು.. ಪ್ರಥಮ ಸ್ಥಾನ ಪಡೆದ ಪ್ರಬಂಜನ್ ಮಾತು! - ಪ್ರಬಂಜನ್ ಜೆ
ಚೆನ್ನೈ( ತಮಿಳುನಾಡು): ವೈದ್ಯಕೀಯ ಪ್ರವೇಶ ಪರೀಕ್ಷೆ (ಎನ್ಇಇಟಿ)ಯಲ್ಲಿ 720 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ತಮಿಳುನಾಡಿನ ಪ್ರಬಂಜನ್ ಜೆ ಎಂಬ ವಿದ್ಯಾರ್ಥಿ ಪಡೆದಿದ್ದಾರೆ. ತಮಿಳುನಾಡಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಲ್ಲಿ ಪ್ರಬಂಜನ್ ಜೆ ಬಳಿಕ ಕೌಸ್ತವ್ ಬೌರಿ 716 ಅಂಕ ಗಳಿಸಿ ಮೂರನೇ ರ್‍ಯಾಂಕ್ ಗಳಿಸಿದ್ದಾರೆ. ಸೂರ್ಯ ಸಿದ್ಧಾರ್ಥ್ ಎನ್. ಮತ್ತು ವರುಣ್ ಎಸ್. ಕ್ರಮವಾಗಿ ಆರು ಮತ್ತು ಒಂಬತ್ತನೇ ರ್‍ಯಾಂಕ್ ಪಡೆದಿದ್ದಾರೆ. ಸ್ಯಾಮ್ಯುಯೆಲ್ ಹರ್ಷಿತ್ ತ್ಸಾಪ 711 ಅಂಕಗಳೊಂದಿಗೆ 24ನೇ ಹಾಗೂ ಜೇಕಬ್ ಬಿವಿನ್ 710 ಅಂಕಗಳೊಂದಿಗೆ 36ನೇ ಶ್ರೇಯಾಂಕ ಪಡೆದಿದ್ದಾರೆ.
ಪ್ರಥಮ ಸ್ಥಾನ ಪಡೆದ ಪ್ರಬಂಜನ್ ಜೆ ಈಟಿವಿ ಭಾರತ ಜೊತೆಗೆ ತಮ್ಮ ಯಶಸ್ಸಿನ ಗುಟ್ಟು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಮುಖ್ಯವಾಗಿ ಎನ್‌ಸಿಆರ್‌ಟಿ ಪುಸ್ತಕವನ್ನು ಶ್ರದ್ಧೆಯಿಂದ ಸಂಪೂರ್ಣ ಅರ್ಥೈಸಿಕೊಂಡು ಓದಿದರೆ ಪ್ರಥಮ ಸ್ಥಾನ ಪಡೆಯುವುದು ಸುಲಭ ಎಂದು ಹೇಳಿಕೊಂಡಿದ್ದಾರೆ.
''ನೀಟ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿರುವುದು ಸಂತಸ ತಂದಿದೆ. ನೀಟ್ ಪರೀಕ್ಷೆಗೆ ನನ್ನ ಶಾಲೆಯಲ್ಲಿ ಶಿಕ್ಷಕರು ಮತ್ತು ಆಡಳಿತ ಮಂಡಳಿ ನೀಡಿದ ತರಬೇತಿ ಮತ್ತು ಸಹಕಾರ ನನಗೆ ಸಾಧನೆ ಮಾಡಲು ನೆರವಾಯಿತು. NEET ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಎನ್‌ಸಿಆರ್‌ಟಿ ಪಠ್ಯಪುಸ್ತಕವನ್ನು ಸಂಪೂರ್ಣವಾಗಿ ಓದಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಎನ್‌ಸಿಆರ್‌ಟಿ ಪುಸ್ತಕಗಳು ಎನ್ಇಇಟಿಗೆ ಭಗವದ್ಗೀತೆ, ಬೈಬಲ್, ಕುರಾನ್ ಇದ್ದಂತೆ. ಶಾಲೆಯ ಪಾಠಗಳ ಜೊತೆಗೆ ಎನ್ಇಟಿಗೂ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಶಾರದಾ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ 10 ನೇ ತರಗತಿಯವರೆಗೆ ಓದಿದ ನಂತರ ನಾನು ಚೆನ್ನೈನ ವೇಲಮ್ಮಾಳ್ ವಿದ್ಯಾಲಯ ಶಾಲೆಗೆ ಸೇರಿದೆ. ರಾಜ್ಯ ಪಠ್ಯಕ್ರಮಕ್ಕೂ ಈ ಪಠ್ಯಕ್ರಮಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ನೀಟ್‌ನಲ್ಲಿ ಕೆಲವು ಪ್ರಶ್ನೆಗಳು ಮಾತ್ರ ಕಷ್ಟಕರವಾಗಿದ್ದವು. ನನ್ನ ಹೆತ್ತವರು ನನಗೆ ಅಧ್ಯಯನಕ್ಕೆ ಅಗತ್ಯ ಇರುವ ಎಲ್ಲ ಸಹಾಯವನ್ನು ನೀಡಿದರು. ಎಂಬಿಬಿಎಸ್ ಮುಗಿಸಿದ ನಂತರ ಎಂಎಸ್ ಸರ್ಜರಿ ಕಲಿಯುತ್ತೇನೆ" ಎಂದು ಹೇಳಿಕೊಂಡಿದ್ದಾರೆ.