ಬೆಂಗಳೂರಿನಲ್ಲಿ 'ದಿ ಕೇರಳ ಸ್ಟೋರಿ' ವೀಕ್ಷಿಸಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ- ವಿಡಿಯೋ - ಜೆಪಿ ನಡ್ಡಾ
ಬೆಂಗಳೂರು: 'ದಿ ಕೇರಳ ಸ್ಟೋರಿ' ಸಿನಿಮಾದ ಕುರಿತು ದೇಶದಲ್ಲಿ ನಡೆಯುತ್ತಿರುವ ಭಾರಿ ಚರ್ಚೆಯ ಬೆನ್ನಲ್ಲೇ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಅಧ್ಯಕ್ಷ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಎಂ.ಜಿ.ರಸ್ತೆಯಲ್ಲಿರುವ ಐನಾಕ್ಸ್ ಗರುಡಾ ಮಾಲ್ನಲ್ಲಿ ಸಿನಿಮಾ ವೀಕ್ಷಿಸಿದರು.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಂಗವಾಗಿ ಪಕ್ಷದ ಪರ ಪ್ರಚಾರದಲ್ಲಿರುವ ನಡ್ಡಾ ನಿನ್ನೆ(ಭಾನುವಾರ) ರಾತ್ರಿ 8.45ಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಅದಕ್ಕೂ ಮೊದಲು ತೇಜಸ್ವಿ ಸೂರ್ಯ ಟ್ವೀಟ್ ಮಾಡಿ, ‘ದಿ ಕೇರಳ ಸ್ಟೋರಿ’ ನಮ್ಮ ಕಾಲದ, ಕೇರಳ ಮತ್ತು ದೇಶದ ಇತರೆ ಭಾಗಗಳಲ್ಲಿನ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಪ್ರಮುಖ ಚಲನಚಿತ್ರ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ನಾವು ಸಿನಿಮಾ ವೀಕ್ಷಿಸುತ್ತಿದ್ದು, ಬೆಂಗಳೂರಿನ ಯುವ ವಿದ್ಯಾರ್ಥಿನಿಯರು ಬರಬೇಕು ಎಂದು ಆಹ್ವಾನಿಸಿದ್ದರು.
ಇದಕ್ಕೂ ಮುನ್ನ ರಾಜ್ಯ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ದಿ ಕೇರಳ ಸ್ಟೋರಿ' ಸಿನಿಮಾ ಭಯೋತ್ಪಾದನೆಯ ಸಂಚಿನ ಮೇಲೆ ಆಧಾರಿತವಾಗಿದೆ. ಈ ಸಿನಿಮಾವು ಭಯೋತ್ಪಾದನೆಯ ಕೊಳಕು ಸತ್ಯವನ್ನು ತೋರಿಸುತ್ತದೆ. ಭಯೋತ್ಪಾದಕರ ವಿನ್ಯಾಸವನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದ್ದರು.
'ದಿ ಕೇರಳ ಸ್ಟೋರಿ' ಲವ್ ಜಿಹಾದ್, ಧಾರ್ಮಿಕ ಮತಾಂತರ ಮತ್ತು ಭಯೋತ್ಪಾದನೆಯ ಕಥಾವಸ್ತುವನ್ನು ಹೊಂದಿದೆ. ಚಲನಚಿತ್ರದಲ್ಲಿ ಕೇರಳ ಮತ್ತು ಮುಸ್ಲಿಮರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಹಾಗೂ ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಉಂಟುಮಾಡಬಹುದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ಇದನ್ನೂ ಓದಿ :’ದಿ ಕೇರಳ ಸ್ಟೋರಿ‘ ಭಯೋತ್ಪಾದನೆಯ ಪಿತೂರಿ ಆಧರಿಸಿದ ಚಿತ್ರ: ಪ್ರಧಾನಿ ನರೇಂದ್ರ ಮೋದಿ