ಬೆಂಗಳೂರು ಮಸಾಲೆ ದೋಸೆಗೆ ಮನಸೋತ ಜೆ.ಪಿ.ನಡ್ಡಾ - ವಿಡಿಯೋ - ಜೆಪಿ ನಡ್ಡಾ ಮಸಾಲೆ ದೋಸೆ
ಬೆಂಗಳೂರು: ಮಸಾಲೆ ದೋಸೆಗೆ ಸಿಲಿಕಾನ್ ಸಿಟಿ ತುಂಬಾ ಫೇಮಸ್. ಬೆಂಗಳೂರಿಗೆ ಬರುವ ಗಣ್ಯರು ಎಂಟಿಆರ್, ವಿದ್ಯಾರ್ಥಿ ಭವನ್, ಜನಾರ್ದನ ಹೋಟೆಲ್ನ ದೋಸೆ ರುಚಿಗೆ ಫಿದಾ ಆಗ್ತಾರೆ. ಅದರಂತೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಸಾಲೆ ದೋಸೆಗೆ ಮನಸೋತರು. ಸಿಟಿಆರ್ ಹೋಟೆಲ್ನ ದೋಸೆಯನ್ನು ಬಾಯಿ ಚಪ್ಪರಿಸಿ ಸವಿದರು.
ಬಿಜೆಪಿ ರಥಯಾತ್ರೆಯ ಅಂಗವಾಗಿ ಬೆಂಗಳೂರಿಗೆ ಆಗಮಿಸಿರುವ ನಡ್ಡಾ, ಮಲ್ಲೇಶ್ವರದ ಹೆಸರಾಂತ ಸಿಟಿಆರ್ ಹೋಟೆಲ್ನಲ್ಲಿ ಜನಸಾಮಾನ್ಯರ ಜತೆ ಬೆರೆತು ತಮ್ಮ ಪಕ್ಷದ ನಾಯಕರೊಂದಿಗೆ ಮಸಾಲೆ ದೋಸೆ ಸೇವಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಮತ್ತು ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಸಂಸದ ತೇಜಸ್ವಿ ಸೂರ್ಯ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಮಂಡಲ ಮುಖ್ಯಸ್ಥೆ ಕಾವೇರಿ ಕೇದಾರನಾಥ್ ಮುಂತಾದವರು ನಡ್ಡಾ ಅವರೊಂದಿಗಿದ್ದರು.
ಇದನ್ನೂ ಓದಿ:ಕಾಂಗ್ರೆಸ್ ನಾಯಕರು ಜಾಮೀನಿನ ಮೇಲಿದ್ದಾರೆ: ಜೆ.ಪಿ.ನಡ್ಡಾ
ಇದಕ್ಕೂ ಮುನ್ನ, ಹೋಟೆಲ್ಗೆ ಆಗಮಿಸಿದ ನಡ್ಡಾರನ್ನು ಸಿಟಿಆರ್ ಸಿಬ್ಬಂದಿ ಹೂಗುಚ್ಛ ನೀಡಿ ಬರಮಾಡಿಕೊಂಡರು. ಕಾರ್ಯಕರ್ತರು ಮತ್ತು ಅಭಿಮಾನಿಗಳು ಜೈಕಾರ ಕೂಗಿ ಸಂಭ್ರಮಿಸಿದರು. ನಂತರ ಹೋಟೆಲ್ನಲ್ಲಿದ್ದ ಗ್ರಾಹಕರ ಬಳಿಗೆ ಹೋಗಿ, ಅವರನ್ನೆಲ್ಲ ಮಾತನಾಡಿಸುವ ಮೂಲಕ ಗಮನ ಸೆಳೆದರು.