ಭೂಕುಸಿತದಿಂದ ತತ್ತರಿಸಿದ ಜೋಶಿಮಠದಲ್ಲಿ ಭಾರಿ ಹಿಮಪಾತ- ವಿಡಿಯೋ
ಉತ್ತರಾಖಂಡ: ರಾಜ್ಯವು ವಿಪರೀತ ಮಳೆ, ಪ್ರವಾಹ ಹಾಗೂ ಭೂ ಕುಸಿತ, ಹಿಮಪಾತ ಸೇರಿದಂತೆ ಪ್ರತಿ ವರ್ಷವೂ ನಾನಾ ರೀತಿಯ ಪ್ರಕೃತಿ ಕೋಪಕ್ಕೆ ತುತ್ತಾಗುತ್ತಲೇ ಇರುತ್ತದೆ. ಲಕ್ಷಾಂತರ ಜನರು ಭೇಟಿ ನೀಡುವ ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನ ಸುಂದರ ಪಟ್ಟಣ ಜೋಶಿಮಠದ ಬಹುತೇಕ ಕಟ್ಟಡಗಳು, ರಸ್ತೆಗಳು ಬಿರುಕು ಬಿಟ್ಟಿದ್ದು, ದೇವಸ್ಥಾನ ಹಾಗೂ ಅನೇಕ ಮನೆಗಳು ಧರೆಗುರುಳಿವೆ. ನಿನ್ನೆ ರಾತ್ರಿ ಮಳೆ ಸುರಿದಿದೆ. ಇಂದು ಮುಂಜಾನೆಯಿಂದ ಹಿಮಪಾತ ಪ್ರಾರಂಭವಾಗಿದೆ. ನಿರಂತರ ಹಿಮಪಾತದಿಂದಾಗಿ 'ಮುಳುಗುತ್ತಿರುವ' ಪಟ್ಟಣದಲ್ಲಿ ಮತ್ತೆ ಕಟ್ಟಡಗಳು ಕುಸಿಯುವ ಆತಂಕವಿದೆ. ಇಲ್ಲಿನ ಮಾಂಧೋಲ್‌ನಲ್ಲಿನ ಮರಗಳು ಮತ್ತು ಮನೆಗಳು ಬಿಳಿ ಬಣ್ಣದಿಂದ ಆವೃತವಾಗಿವೆ. ಪ್ರಾದೇಶಿಕ ಹವಾಮಾನ ಕೇಂದ್ರದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಔಲಿ ಎಂಬಲ್ಲಿ (ಜೋಶಿಮಠದಿಂದ 12 ಕಿಮೀ ಮುಂದೆ ಇದೆ) ಭಾರಿ ಹಿಮಪಾತವಾಗುತ್ತಿದ್ದು 4 ರಿಂದ 6 ಅಡಿಯಷ್ಟು ಹಿಮ ಬೀಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.