ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಶೂಟಿಂಗ್: ಭಾರತಕ್ಕೆ ಎರಡು ಚಿನ್ನ - ಈಟಿವಿ ಭಾರತ್ ಕನ್ನಡ ನ್ಯೂಸ್
ಅಸನ್ಸೋಲ್ (ಪಶ್ಚಿಮ ಬಂಗಾಳ) : ಜರ್ಮನಿಯಲ್ಲಿ ನಡೆದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳಾದ ಅಭಿನವ್ ಶಾ ಮತ್ತು ಗೌತಮಿ ಭಾನೋಟ್ ಚಿನ್ನದ ಪದಕ ಗೆದ್ದಿದ್ದಾರೆ. ಈ ಗೆಲುವಿನಿಂದ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತಕ್ಕೆ ಎರಡನೇ ಚಿನ್ನ ಲಭಿಸಿದೆ. ಅಚ್ಚರಿ ಪ್ರದರ್ಶನ ನೀಡಿದ ಭಾರತದ ಜೋಡಿಯು ಫ್ರಾನ್ಸ್‌ನ ಓಸಿಯಾನ್ ಮುಲ್ಲರ್ ಮತ್ತು ರೊಮೈನ್ ಔಫ್ರೆರೆರನ್ನು 10-ಮೀಟರ್ ಏರ್ ರೈಫಲ್ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ 17 - 7ರಿಂದ ಸೋಲಿಸಿ ಐತಿಹಾಸಿಕ ಗೆಲುವು ದಾಖಲಿಸಿದೆ.
ಇನ್ನು ಪದಕ ಪಟ್ಟಿಯಲ್ಲಿ ಭಾರತವು ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನೊಂದಿಗೆ ಅಗ್ರಸ್ಥಾನದಲ್ಲಿದೆ. ಕೊರಿಯಾ ಒಂದು ಚಿನ್ನ ಮತ್ತು ಎರಡು ಬೆಳ್ಳಿಯೊಂದಿಗೆ ಎರಡನೇ ಸ್ಥಾನದಲ್ಲಿ ಹಾಗೂ ಇಟಲಿ ಮೂರನೇ ಸ್ಥಾನದಲ್ಲಿದೆ. 16 ವರ್ಷದ ಅಭಿನವ್ ಅವರು, ಅಸನ್ಸೋಲ್ ರೈಫಲ್ ಕ್ಲಬ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಚಿಕ್ಕವಯಸ್ಸಿನಿಂದಲೂ ಅಭಿನವ್ ವಿವಿಧ ಸ್ಪರ್ಧೆಗಳಲ್ಲಿ ಆಕರ್ಷಕ ಪ್ರದರ್ಶನ ನೀಡಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ತಂದು ಕೊಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಅಭಿನವ್ ಅವರ ಪ್ರಭಾವಶಾಲಿ ಪ್ರದರ್ಶನಕ್ಕಾಗಿ ಅಸನ್ಸೋಲ್ ರೈಫಲ್ ಕ್ಲಬ್ ಅಧ್ಯಕ್ಷ ಬೀರೇಂದ್ರ ಕುಮಾರ್ ಧಾಲ್ ಅಭಿನಂದಿಸಿದ್ದಾರೆ. ಮತ್ತೊಂದೆಡೆ ತಂದೆ ತಾಯಿ ಕೂಡ ಇವರ ಸಾಧನೆಗೆ ಬೆನ್ನೆಲುಬಾಗಿದ್ದಾರೆ.
ಇದನ್ನೂ ಓದಿ :ಗೆಲುವಿನ ಓಟ ಮುಂದುವರೆಸಿದ ಸಾತ್ವಿಕ್-ಚಿರಾಗ್.. ವರ್ಷದ ನಾಲ್ಕನೇ ಪ್ರಶಸ್ತಿ ಗೆದ್ದ ಜೋಡಿ