ಬ್ರಿಟನ್‌ನ 36 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿದ ಇಸ್ರೋ: ವಿಡಿಯೋ - ಇಸ್ರೋದಿಂದ ಉಪಗ್ರಹ ಉಡಾವಣೆ
ಶ್ರೀಹರಿಕೋಟಾ (ಆಂಧ್ರಪ್ರದೇಶ):ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಬ್ರಿಟನ್‌ನ ಒನ್‌ವೆಬ್ ಗ್ರೂಪ್ ಕಂಪನಿಯೊಂದಿಗಿನ ಒಪ್ಪಂದದ ಭಾಗವಾಗಿ ಇಂದು 36 ಉಪಗ್ರಹಗಳನ್ನು ಉಡಾಯಿಸಿ ನಿಗದಿತ ಕಕ್ಷೆ ಸೇರಿಸಿತು. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 9 ಗಂಟೆಗೆ ಉಡಾವಣಾ ವಾಹನ ಮಾರ್ಕ್-III (LVM3-M3) ನಲ್ಲಿ ಉಪಗ್ರಹಗಳನ್ನು ನಭಕ್ಕೆ ಕಳುಹಿಸಲಾಯಿತು.
ಇಸ್ರೋದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ 72 ಉಪಗ್ರಹಗಳನ್ನು ಉಡಾವಣೆ ಮಾಡಲು ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟ್ಸ್ ಲಿಮಿಟೆಡ್ (ಯುನೈಟೆಡ್ ಕಿಂಗ್‌ಡಮ್, ಒನ್‌ವೆಬ್ ಗ್ರೂಪ್ ಕಂಪನಿ) ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕೂ ಮೊದಲು ಅಂದರೆ 2022 ರ ಅಕ್ಟೋಬರ್ 23 ರಂದು 36 ಉಪಗ್ರಹಗಳ ಮೊದಲ ಗೊಂಚಲನ್ನು ಯಶಸ್ವಿಯಾಗಿ ಉಡಾಯಿಸಲಾಗಿತ್ತು.
ನ್ಯೂಸ್ಪೇಸ್, ಇಸ್ರೋದ ವಾಣಿಜ್ಯ ಅಂಗವಾಗಿದ್ದರೆ, ಒನ್‌ವೆಬ್ ಬಾಹ್ಯಾಕಾಶ ಆಧಾರಿತ ನೆಟ್‌ವರ್ಕಿಂಗ್ ಸಂಸ್ಥೆಯಾಗಿದೆ. ಇದು ಸರ್ಕಾರಗಳ ಮತ್ತು ಅದರ ವ್ಯವಹಾರಗಳಿಗೆ ಸಂಬಂಧಿಸಿದ ಸಂಪರ್ಕಗಳಿಗಾಗಿ ಕಾರ್ಯನಿರ್ವಹಿಸುವ ಜಾಗತಿಕ ಸಂವಹನ ಸಂಸ್ಥೆ.
ಒನ್‌ವೆಬ್ ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆ ಸೇರಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಜಾಗತಿಕ ಸಂಸ್ಥೆ, ಇದರೊಂದಿಗೆ ಕಕ್ಷೆಯಲ್ಲಿ 616 ಉಪಗ್ರಹಗಳನ್ನು ಹೊಂದಿದ್ದೇವೆ. ವರ್ಷದ ನಂತರ ತಮ್ಮ ಜಾಗತಿಕ ಸೇವೆಗಳನ್ನು ಪ್ರಾರಂಭಿಸಲು ಇದು ನೆರವು ನೀಡುತ್ತದೆ ಎಂದು ಹೇಳಿದೆ. ಇಸ್ರೋ ಇಂದಿನ ಉಡಾವಣೆಗಾಗಿ 43.5 ಮೀಟರ್ ಎತ್ತರದ ಮಾರ್ಕ್-3 ರಾಕೆಟ್ ನಿಯೋಜಿಸಿತ್ತು. ಇದು 36 ಉಪಗ್ರಹಗಳನ್ನು ಒಳಗೊಂಡು 5,805 ಕೆಜಿ ತೂಕ ಹೊಂದಿತ್ತು. ಒನ್ವೆಬ್ನ ಎಲ್ಲ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸಿ ಇಸ್ರೋ ವಿಕ್ರಮ ಮೆರೆದಿದೆ.
ಇದನ್ನೂ ಓದಿ:36 ಉಪಗ್ರಹಗಳ ಉಡಾವಣೆಗೆ ಸಿದ್ಧವಾಗುತ್ತಿವೆ ಒನ್‌ವೆಬ್ ಮತ್ತು ಇಸ್ರೋ: ಐತಿಹಾಸಿಕ ಮಿಷನ್ಗೆ ಕ್ಷಣಗಣನೆ