ಭೂಮಿಯ ಮೇಲೆ ಹಾಲ್ಬೆಳಕು ಚೆಲ್ಲಿದ ವರ್ಷದ ಮೊದಲ 'ಸೂಪರ್‌ಮೂನ್': ವಿಡಿಯೋ ನೋಡಿ - Supermoon
ನವದೆಹಲಿ:ಈ ತಿಂಗಳಲ್ಲಿ ಕಾಣಿಸಿಕೊಳ್ಳುವ ಸೂಪರ್ಮೂನ್ಗಳ ಪೈಕಿ ಮೊದಲ ಸೂಪರ್‌ಮೂನ್ ಮಂಗಳವಾರ ರಾತ್ರಿ ಗೋಚರವಾಗಿದೆ. ಭಾರತದ ಹಲವು ಪ್ರದೇಶಗಳಲ್ಲಿ ಬೆಳದಿಂಗಳ ಚಂದಿರ ಕಾಣಿಸಿಕೊಂಡಿದ್ದ. ಈ ವಿಶೇಷ ವಿದ್ಯಮಾನವನ್ನು ಜನರು ಮೊಬೈಲ್, ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ದೆಹಲಿ, ಲಖನೌ, ಬೆಂಗಳೂರು ಮತ್ತು ಪಂಜಾಬ್‌ನಲ್ಲಿ 'ಸೂಪರ್‌ಮೂನ್' ಕಂಡರೆ, ಕೋಲ್ಕತ್ತಾದಲ್ಲಿ ಮೋಡಗಳ ದಟ್ಟಣೆಯಿಂದಾಗಿ ಚಂದಮಾಮ ಅಲ್ಲಿನ ಜನರಿಗೆ ಕಾಣಲು ಸಿಕ್ಕಿಲ್ಲ.
ಈ ವಿಶೇಷ ವಿದ್ಯಮಾನದ ಬಗ್ಗೆ ವಿವರಿಸಿದ ಖಗೋಳ ಭೌತಶಾಸ್ತ್ರಜ್ಞ ಡೆಬಿಪ್ರೊಸಾದ್ ದುವಾರಿ, ಚಂದ್ರನು ಭೂಮಿಯ ಸುತ್ತ 27.3 ದಿನಗಳಿಗೊಮ್ಮೆ ದೀರ್ಘವೃತ್ತದ ಕಕ್ಷೆಯಲ್ಲಿ ಸುತ್ತುತ್ತಾನೆ. ಆಗ ಅದರ ಕಕ್ಷೆಯ ಕೆಲವು ಹಂತದಲ್ಲಿ ಭೂಮಿಯಿಂದ ದೂರ ಮತ್ತು ಸಮೀಪಕ್ಕೆ ಬರುತ್ತದೆ. ಆಗ ಈ ಸೂಪರ್‌ಮೂನ್ ವಿದ್ಯಮಾನ ಘಟಿಸುತ್ತದೆ ಎಂದು ತಿಳಿಸಿದರು.
ಭೂಮಿಯಿಂದ ಚಂದ್ರನ ಬಿಂದು ದೂರವಾಗಿದ್ದರೆ ಅದನ್ನು ಅಪೋಜಿ, ಭೂಮಿಗೆ ಹತ್ತಿರವಾಗಿದ್ದರೆ ಪೆರೋಜಿ ಎಂದು ಕರೆಯಲಾಗುತ್ತದೆ. ಚಂದ್ರ ಭೂಮಿಯ ಸಮೀಪ ಬಂದಾಗ ಈ ಸೂಪರ್‌ಮೂನ್ ವಿದ್ಯಮಾನ ಕಾಣಸಿಗುತ್ತದೆ. 2018ರಲ್ಲಿ ಒಂದೇ ತಿಂಗಳಲ್ಲಿ ಎರಡು ಸೂಪರ್‌ಮೂನ್‌ಗಳು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದವು. ಈ ವರ್ಷ ಮತ್ತೆ ಆ ವಿಶೇಷ ನಡೆಯಲಿದೆ. ಇದಾದ ಬಳಿಕ ಮುಂದಿನ ಅಂತಹ ವಿದ್ಯಮಾನವು 2037 ರಲ್ಲಿ ಗೋಚರಿಸಲಿದೆ ಎಂದು ಅವರು ಹೇಳಿದರು.
ಸೂಪರ್‌ಮೂನ್ ವೇಳೆ ಭೂಮಿಯಿಂದ ನೋಡಿದಾಗ ಸಾಮಾನ್ಯ ಹುಣ್ಣಿಮೆಗಿಂತ ಚಂದ್ರ ಶೇಕಡಾ 7 ರಷ್ಟು ದೊಡ್ಡದಾಗಿ ಮತ್ತು ಶೇಕಡಾ 16 ರಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಾನೆ. ಭೂಮಿ ಮತ್ತು ಚಂದ್ರನ ನಡುವಿನ ಸರಾಸರಿ ಅಂತರ 3,84,000 ಕಿ.ಮೀ. ಆಗಿದೆ. ಭೂಮಿಯನ್ನು ಸುತ್ತುವಾಗ ಅದರ ದೂರವು ಬದಲಾಗಬಹುದು. ಪೆರೋಜಿ ಸ್ಥಿತಿಯಲ್ಲಿದ್ದಾಗ ಗರಿಷ್ಠ 3,56,000 ಕಿಮೀ ಸಮೀಪ ಬರುತ್ತದೆ. ಅಪೋಜಿ ವೇಳೆ ಗರಿಷ್ಠ 4,04,000 ಕಿಮೀ ದೂರ ಸಾಗುತ್ತದೆ.
ಮಂಗಳವಾರ ರಾತ್ರಿ ಕಂಡು ಬಂದ ಸೂಪರ್‌ಮೂನ್ ಭೂಮಿಯಿಂದ 3,57,530 ಕಿ.ಮೀ ದೂರದಲ್ಲಿತ್ತು. ಆಗಸ್ಟ್ 30 ರಂದು ನಡೆಯುವ ಮತ್ತೊಂದು ವಿದ್ಯಮಾನದಲ್ಲಿ ಚಂದ್ರ ಇನ್ನಷ್ಟು ಹತ್ತಿರ ಅಂದರೆ 3,57,344 ಕಿಮೀ ಸಮೀಪಿಸುತ್ತಾನೆ. ಇನ್ನೂ ಪ್ರಕಾಶಮಾನ ಚಂದ್ರನನ್ನು ಕಾಣಬಹುದು ಎಂದು ತಿಳಿಸಿದರು.
ಇದನ್ನೂ ಓದಿ:Supermoon: ಆಗಸ್ಟ್ ತಿಂಗಳು ಆಗಸದಲ್ಲಿ ಅಚ್ಚರಿ; ಒಂದೇ ತಿಂಗಳಲ್ಲಿ ಬ್ಲೂ ಮೂನ್, ಸೂಪರ್‌ಮೂನ್ ಮೋಡಿ