ಹಾರ ಬದಲಿಸಿಕೊಂಡು ಸರಳ ವಿವಾಹವಾದ ಐಎಎಸ್, ಐಪಿಎಸ್ ಅಧಿಕಾರಿಗಳು: ವಿಡಿಯೋ ನೋಡಿ - officers simple Marriage
ಮಚಲಿಪಟ್ಟಣಂ (ಆಂಧ್ರಪ್ರದೇಶ) :ವಿವಾಹ ಎಂದರೆ ಅದೊಂದು ಸಂಭ್ರಮ, ಅದ್ಧೂರಿತನ, ಬಂಧು ಬಾಂಧವರ ಸದ್ದು ಗದ್ದಲವಿರುತ್ತೆ. ಗಂಡು- ಹೆಣ್ಣಿಗೆ ನೂರಾರು ಕನಸುಗಳು ಕೋರೈಸುತ್ತಿರುತ್ತವೆ. ಆದರೆ ಇಲ್ಲಿಬ್ಬರು ಅಧಿಕಾರಿಗಳು ಮಾತ್ರ ಯಾವುದೇ ಸದ್ದುಗದ್ದಲವಿಲ್ಲದೇ ಸಿಂಪಲ್ ಆಗಿ ಮದುವೆಯಾಗಿ ಆದರ್ಶ ಮೆರೆದಿದ್ದಾರೆ. ರಿಜಿಸ್ಟ್ರಾರ್ ಆಫೀಸಿನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.
ಐಎಎಸ್ ಅಧಿಕಾರಿ ಡಾ.ಅಪರಾಜಿತ ಸಿಂಗ್ ಸಿನ್ವರ್, ಐಪಿಎಸ್ ತರಬೇತಿ ಪಡೆಯುತ್ತಿರುವ ದೇವೇಂದ್ರ ಕುಮಾರ್ ಆದರ್ಶ ವಿವಾಹವಾದ ಅಧಿಕಾರಿಗಳು. ಇಬ್ಬರೂ ರಾಜಸ್ಥಾನ ಮೂಲದವರಾಗಿದ್ದಾರೆ. ಅಪರಾಜಿತ ಸಿಂಗ್ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣಂನಲ್ಲಿ ಜಂಟಿ ಜಿಲ್ಲಾಧಿಕಾರಿಯಾಗಿದ್ದಾರೆ. ದೇವೇಂದ್ರಕುಮಾರ್ ಹೈದರಾಬಾದ್‌ನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಮಚಲಿಪಟ್ಟಣಂ ಕಲೆಕ್ಟರೇಟ್‌ನಲ್ಲಿರುವ ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ಬುಧವಾರ ಸಹೋದ್ಯೋಗಿಗಳು, ಸಿಬ್ಬಂದಿ ಸಮ್ಮಖದಲ್ಲಿ ಹಾರ ಬದಲಿಸುವ ಮೂಲಕ ವಿವಾಹವಾದರು. ಮದುವೆಗೆ ಸ್ವತಃ ಅವರ ಬಂಧುಗಳು ಯಾರೊಬ್ಬರೂ ಇರಲಿಲ್ಲ. ಐಪಿಎಸ್, ಐಎಎಸ್ ಅಧಿಕಾರಿಗಳಿದ್ದರೂ, ಸರಳ ವಿವಾಹವಾಗಿದ್ದು ಅಚ್ಚರಿ ಮೂಡಿಸಿದೆ. ಮದುವೆಯ ನಂತರ ನವ ದಂಪತಿ ಗುಡ್ಲವಲ್ಲೇರು ಮಂಡಲದ ವೇಮಾವರಂನಲ್ಲಿರುವ ಶ್ರೀಕೊಂಡಲಮ್ಮ ಅಮ್ಮನವರ ದರ್ಶನಕ್ಕೆ ತೆರಳಿದರು.
ಇದನ್ನೂ ಓದಿ:Sana Khan: ಇನ್ನೂ ಪತ್ತೆಯಾಗದ ಬಿಜೆಪಿ ನಾಯಕಿ ಸನಾ ಖಾನ್; ಪೊಲೀಸರಿಂದ ತನಿಖೆ ಚುರುಕು