ನಾನು ಯಾರ ಕೈ ಹಿಡಿಯುತ್ತೇನೆ ಅನ್ನೋದು ಮೇ ಚುನಾವಣೆ ನಂತರ ಗೊತ್ತಾಗಲಿದೆ: ಜನಾರ್ದನ ರೆಡ್ಡಿ - ಮೇ ಚುನಾವಣೆ ನಂತರ ಗೊತ್ತಾಗಲಿದೆ
ಬೆಳಗಾವಿ: ನೂರಕ್ಕೆ ನೂರರಷ್ಟು 2023ರಲ್ಲಿ ನಾನೇ ರಾಜ್ಯದ ಅಧಿಕಾರ ಕೈಯಲ್ಲಿ ತೆಗೆದುಕೊಳ್ಳುತ್ತೇನೆ. ಇಲ್ಲವಾದರೆ ಅಧಿಕಾರ ನಡೆಸುವವರ ಕೈ ಹಿಡಿದುಕೊಂಡಾದರೂ ಆಡಳಿತ ನಡೆಸುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಇಂದು ನಡೆದ ವೇಮನರ 611ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬರುವ ಚುನಾವಣೆಯಲ್ಲಿ ವೇಮನರ ಮತ್ತು ವೇಮನಾನಂದ ಶ್ರೀಗಳ ಆಶೀರ್ವಾದದಿಂದ ಅಧಿಕಾರ ಹಿಡಿಯಬಲ್ಲೇ ಎಂಬ ವಿಶ್ವಾಸ ಮೂಡಿದೆ. ಇದರಲ್ಲಿ ಯಾವುದೇ ಸಂಶಯ ಬೇಡ. ಇಂದಿನ ಕಾರ್ಯಕ್ರಮದಲ್ಲಿ ಎಲ್ಲ ಪಕ್ಷಗಳ ಹಿರಿಯರಿದ್ದಾರೆ. ನನ್ನ ಕೈ ಯಾರು ಹಿಡಿಯುತ್ತಾರೆ, ನಾನು ಯಾರ ಕೈಹಿಡಿಯುತ್ತೇನೆ ಅನ್ನೋದು ಮೇ ಚುನಾವಣೆ ನಂತರ ಗೊತ್ತಾಗಲಿದೆ ಎಂದರು.
ಒಳ್ಳೆಯ ದಿನಗಳು ಈ ರಾಜ್ಯಕ್ಕೆ ಬಂದೇ ಬರುತ್ತವೆ. ಪ್ರತ್ಯೇಕ ರಾಜ್ಯದ ಬಗ್ಗೆ ನಾವು ಯಾರೂ ಯೋಚನೆ ಮಾಡುವುದೇ ಬೇಡ. ಪ್ರತ್ಯೇಕ ರಾಜ್ಯ ಬೇಕು ಎಂದು ಹೋರಾಟ ಮಾಡಿದರೆ ಜಾತಿಗಾಗಿ ಹೋರಾಟ ಮಾಡಬೇಕಿಲ್ಲ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 10 ದಿನ ಹೋರಾಟ ಮಾಡಿದರೆ ಸಾಕು, ಎಲ್ಲ ಪಕ್ಷಗಳ ಹಿರಿಯ ನಾಯಕರು ಬಂದು ಚಿನ್ನದ ಪ್ಲೇಟ್‌ನಲ್ಲಿ ಪ್ರತ್ಯೇಕ ರಾಜ್ಯ ಕೊಡುತ್ತಾರೆ. ನಾವು ಆ ತಪ್ಪು ಕೆಲಸ ಮಾಡುವುದು ಬೇಡವೇ ಬೇಡ. ರಾಜ್ಯದ ಬಜೆಟ್‌ನಲ್ಲಿ ಹೆಚ್ಚಿನ ಹಣ ಬೆಂಗಳೂರ ಭಾಗಕ್ಕೆ ಖರ್ಚು ಮಾಡಲಾಗುತ್ತಿದೆ. ನಮ್ಮ ತೆರಿಗೆಯ ಹಣದ ಶೇ. 80 ರಷ್ಟು ಹಣವನ್ನು ಬೆಂಗಳೂರು ಅಭಿವೃದ್ಧಿಗೆ ನೀಡಲಾಗುತ್ತದೆ. ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆ ಹಣದಲ್ಲಿ ಹೆಚ್ಚಿನ ಹಣ ಬೆಂಗಳೂರಿಗೆ ಖರ್ಚು ಮಾಡಲಾಗುತ್ತಿದೆ. ಇದು ದುರಂತ ಎಂದರು.
ಇದನ್ನೂ ಓದಿ:ರಾಷ್ಟ್ರ ವಿರೋಧಿಗಳಿಗೆ ಬೆಂಬಲಿಸುವ ಕಾಂಗ್ರೆಸ್ನಿಂದ ಕರ್ನಾಟಕ ರಕ್ಷಣೆ ಅಸಾಧ್ಯ: ಅಮಿತ್ ಶಾ