ಕಾಂಗ್ರೆಸ್ ಸುಳ್ಳನ್ನು ತೆಲಂಗಾಣ ಚುನಾವಣೆಯಲ್ಲಿ ಹೇಳುವೆ: ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ - ಪಂಚರಾಜ್ಯ ಚುನಾವಣೆ
Published : Nov 9, 2023, 8:57 PM IST
ಧಾರವಾಡ :ರೈತರು ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಧಾರವಾಡದ ಮುರುಘಾಮಠದಿಂದ ಆರಂಭಗೊಂಡ ಮೆರವಣಿಗೆ ವಿವಿಧ ಮಾರ್ಗಗಳ ಮೂಲಕ ಡಿಸಿ ಕಚೇರಿ ತಲುಪಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ರ‍್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಒಣಗಿದ ಬೆಳೆಗಳನ್ನು ಹಿಡಿದುಕೊಂಡು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಗೆ ಜಗ್ಗಲಿಗೆ, ಡೊಳ್ಳು ವಾದ್ಯ, ಕೋಲಾಟ ನೃತ್ಯದ ಮೆರಗು ನೀಡಿದವು. ಬಳಿಕ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುವುದಾಗಿ ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಮೂರು ಕೃಷಿ ಕಾಯಿದೆ ವಾಪಸ್ ಮಾಡುತ್ತೇವೆ ಎಂದಿದ್ದರು. ರಾಹುಲ್ ಗಾಂಧಿಯೇ ಹೇಳಿದ್ದರು. ರಾಜ್ಯದಲ್ಲಿ ಅವರದೇ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ, ರೈತರಿಗೆ ಮಾರಕವಾದ ಕೃಷಿ ಕಾಯಿದೆಗಳ ರದ್ದು ಆಗಿಲ್ಲ. ಹೀಗಾಗಿ ಇವರು ಸುಳ್ಳು ಹೇಳಿದ್ದಾರೆ. ನಾನು ಇದನ್ನು ತೆಲಂಗಾಣಕ್ಕೆ ಹೋಗಿ ಹೇಳುವೆ. ರಾಹುಲ್ ಗಾಂಧಿ ಹೇಳುವುದು ಸುಳ್ಳು. ಸಿದ್ದರಾಮಯ್ಯ, ಡಿಕೆಶಿ ಹೇಳುವುದೆಲ್ಲ ಸುಳ್ಳು ಎಂದು ಹೇಳುವೆ ಎಂದರು.
ಕಾಂಗ್ರೆಸ್ ಕರ್ನಾಟಕದಲ್ಲಿ ಏನೂ ಮಾಡಿಲ್ಲ ಎಂದು ಹೇಳುವೆ. ಇದಕ್ಕಾಗಿ ಇದೇ 22ರಂದು ನಾನು ತೆಲಂಗಾಣಕ್ಕೆ ಹೋಗುತ್ತಿರುವೆ. ಅಲ್ಲಿ ರೈತ ಸಮಾವೇಶ ಮಾಡಿ ಅಲ್ಲಿನ ಜನರಿಗೆ ತಿಳಿಸುತ್ತೇವೆ. ಇವರು ಪಂಚರಾಜ್ಯ ಚುನಾವಣೆಯಲ್ಲಿ ಕರ್ನಾಟಕದ ಬಗ್ಗೆ ಹೇಳುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಇವರು ಏನೂ ಮಾಡಿಲ್ಲ. ಅದನ್ನು ನಾವು ಆ ರಾಜ್ಯದ ಜನರಿಗೆ ತಿಳಿಸಲು ಮುಂದಾಗಿದ್ದೇವೆ ಎಂದು ಹೇಳಿದರು.