ಇಂಡಿಯಾ ಮೈತ್ರಿಕೂಟದ ಸಭೆಗೆ ಖಂಡಿತ ಹೋಗುತ್ತೇನೆ: ಬಿಹಾರ ಸಿಎಂ ನಿತೀಶ್ ಕುಮಾರ್
Published : Dec 6, 2023, 1:47 PM IST
|Updated : Dec 6, 2023, 4:41 PM IST
ಪಾಟ್ನಾ:''ಇಂಡಿಯಾ ಮೈತ್ರಿಕೂಟದ ಸಭೆಗೆ ಖಂಡಿತ ಹೋಗುತ್ತೇನೆ. ಕೋಪಗೊಳ್ಳುವುದು ತಪ್ಪು, ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ನಾನು ಬಯಸುತ್ತೇನೆ'' ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ತಿಳಿಸಿದ್ದಾರೆ. ಆದ್ರೆ, ಡಿ.6ರಂದು ಅಂದರೆ ಇಂದು (ಬುಧವಾರ) ನಡೆಯಬೇಕಿದ್ದ ಮೈತ್ರಿಕೂಟದ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ.
ಈ ಹಿಂದಿನ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟದ ಮುಂದಿನ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಪಾಟ್ನಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನನ್ನ ಬಗ್ಗೆ ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ. ನನಗೆ ಯಾವುದೇ ಹುದ್ದೆ ಬೇಡ, ಮೈತ್ರಿಯನ್ನು ಗಟ್ಟಿಗೊಳಿಸುವ ಉದ್ದೇಶವಿದೆ. ಸಭೆಗೆ ಹೋಗುತ್ತಿಲ್ಲ, ಅಸ್ವಸ್ಥರಾಗಿದ್ದೇವೆ ಎಂಬ ವರದಿಗಳು ಪ್ರಕಟವಾಗುತ್ತಿವೆ. ಆದ್ರೆ, ಮುಂದಿನ ಸಭೆಯಲ್ಲಿ ಭವಿಷ್ಯದ ಎಲ್ಲಾ ವಿಷಯಗಳನ್ನು ನಿರ್ಧರಿಸಬೇಕು ಎಂದು ನಾವು ಹೇಳುತ್ತೇವೆ. ಇದು ದೇಶದ ಹಿತಾಸಕ್ತಿ ಎಂದು ನಾನು ಮೊದಲಿನಿಂದಲೂ ಹೇಳುತ್ತಾ ಬರುತ್ತಿದ್ದೇನೆ" ಎಂದು ತಿಳಿಸಿದರು.
''ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವುದು ಮಾತ್ರ ನಮ್ಮ ಗುರಿಯಾಗಿದೆ. ನಮಗೆ ಯಾವುದೇ ಹುದ್ದೆ ಬೇಡ. ಎಲ್ಲರೂ ಒಗ್ಗಟ್ಟಾಗಿರಬೇಕೆಂದು ನಾವು ಬಯಸುತ್ತೇವೆ'' ಎಂದ ಅವರು, ''ಐದು ದಿನಗಳಿಂದ ನನಗೆ ಜ್ವರ, ಕೆಮ್ಮು, ನೆಗಡಿ ಇತ್ತು, ಆರೋಗ್ಯ ಸರಿಯಿಲ್ಲ. ಹೀಗಾಗಿ ಸಭೆಗೆ ಹೋಗಲು ಮನಸ್ಸಾಗಲಿಲ್ಲ'' ಎಂದು ನಿತೀಶ್ ಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
''ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ದೊರೆತರೆ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿಯಾಗಲಿದೆ. ಬಿಹಾರ ಪೌರಾಣಿಕ ಭೂಮಿಯಾಗಿದ್ದು, ಇಲ್ಲಿಂದ ಎಲ್ಲವೂ ನಡೆದಿದೆ. ನಾವೂ ತುಂಬಾ ಅಭಿವೃದ್ಧಿ ಮಾಡಿದ್ದೇವೆ'' ಎಂದ ಅವರು, ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಕಾಂಗ್ರೆಸ್ ಕೂಡ ಉತ್ತಮ ಮತಗಳನ್ನು ಪಡೆದಿದೆ. ಈಗ ನಾವೆಲ್ಲರೂ ಭವಿಷ್ಯದಲ್ಲಿ ಶಕ್ತಿಯೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಂಸತ್ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಿದ ಗುರುಪತ್ವಂತ್ ಸಿಂಗ್ ಪನ್ನುನ್!