ನಂಜುಂಡೇಶ್ವರನ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಸಹಿತ ₹1.26 ಕೋಟಿ ಕಾಣಿಕೆ ಸಂಗ್ರಹ - ಉಪ ವಿಭಾಗಾಧಿಕಾರಿ ಕೆ ಆರ್ ರಕ್ಷಿತ್
ಮೈಸೂರು: ದಕ್ಷಿಣ ಕಾಶಿಯೆಂದು ಖ್ಯಾತಿಗಳಿಸಿರುವ ನಂಜನಗೂಡಿನ ನಂಜುಂಡೇಶ್ವರನಿಗೆ ಭಕ್ತಾದಿಗಳು ಒಂದೇ ತಿಂಗಳಿನಲ್ಲಿ 1.26 ಕೋಟಿ ರೂ. ಕಾಣಿಕೆ ನೀಡಿದ್ದಾರೆ. ಒಂದು ತಿಂಗಳ ನಂತರ ದೇವಸ್ಥಾನದ ಆವರಣದಲ್ಲಿ 33 ಹುಂಡಿಗಳಲ್ಲಿರುವ ಹಣ, ಚಿನ್ನಾಭರಣವನ್ನು ದೇವಸ್ಥಾನದ ಸಿಬ್ಬಂದಿ ಇಂದು ಎಣಿಕೆ ಮಾಡಿದ್ದಾರೆ.
1,26,65,782 ರೂ. ನಗದು, 50 ಗ್ರಾಂ ಚಿನ್ನ, 3 ಕೆಜಿ 750 ಗ್ರಾಂ ಬೆಳ್ಳಿ, 9 ವಿದೇಶಿ ಕರೆನ್ಸಿ, 163 ಯುಎಸ್‌ಎ ಡಾಲರ್, 20 ಹಾಂಗ್‌ಕಾಂಗ್ ಡಾಲರ್ ಸಿಕ್ಕಿದೆ. ಪ್ರತಿ ಎಣಿಕೆ ಸಂದರ್ಭದಲ್ಲಿ ಸಿಗುತ್ತಿದ್ದ 500, 1000 ರೂ. ಮುಖಬೆಲೆಯ ನೋಟುಗಳು ಈ ಬಾರಿ ಸಿಕ್ಕಿಲ್ಲ. ಉಪ ವಿಭಾಗಾಧಿಕಾರಿ ಕೆ.ಆರ್.ರಕ್ಷಿತ್, ಮುಜರಾಯಿ ತಹಶೀಲ್ದಾರ್ ಸಿ.ಜಿ.ಕೃಷ್ಣಘಿ, ಇಒ ಜಗದೀಶ್ ಕುಮಾರ್, ಎಇಒ ವೆಂಕಟೇಶ್ ಪ್ರಸಾದ್, ಅಕೌಂಟ್ ಸೂಪರಿಂಟೆಂಡೆಂಟ್ ಗುರುಮಲ್ಲಯ್ಯ, ನಂಜನಗೂಡಿನ ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಟಿ.ಕೆ.ನಾಯಕ್ ಇದ್ದರು.