ಪ್ರತಿಭಟನೆ ವೇಳೆ ಸಂಸದ ಎಸ್ ಮುನಿಸ್ವಾಮಿ ಸೇರಿದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಹೆಜ್ಜೇನು ದಾಳಿ
Published : Sep 8, 2023, 3:57 PM IST
ಕೋಲಾರ: ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರ ಮೇಲೆ ಹೆಜ್ಜೇನು ದಾಳಿ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಇಂದು ಕೋಲಾರ ಹೊವಲಯದ ಜಿಲ್ಲಾಧಿಕಾರಿಗಳ ಕಚೇರಿ ಬಳಿ, ಕಾಂಗ್ರೇಸ್ ಸರ್ಕಾರದ ಜನ ವಿರೋಧಿ ನೀತಿಯನ್ನ ವಿರೋಧಿಸಿ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು.
ಈ ವೇಳೆ ಜಿಲ್ಲಾಧಿಕಾರಿಗಳ ಕಟ್ಟಡದಲ್ಲಿದ್ದ ಹೆಜ್ಜೇನು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದೆ. ಪ್ರತಿಭಟನಾಕಾರರು ಚೆಲ್ಲಾಪಿಲ್ಲಿಯಾಗಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕೆಲವರು ಜಿಲ್ಲಾಧಿಕಾರಿಗಳ ಕಚೇರಿಯೊಳಗೆ ನುಗ್ಗಿ ಹೆಜ್ಜೇನಿನಿಂದ ತಪ್ಪಿಸಿಕೊಂಡರೆ, ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಪೊಲೀಸರು, ಪತ್ರಕರ್ತರ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಜೇನು ದಾಳಿ ನಡೆಸಿವೆ.
ದಾಳಿಗೊಳಗಾದ ಕಾರ್ಯಕರ್ತರನ್ನ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ದಿನ ನಿತ್ಯದ ವಸ್ತುಗಳ ಬೆಲೆ ಏರಿಕೆಯಾಗಿದೆ, ಜೊತೆಗೆ ವಿದ್ಯುತ್ ದರ ಏರಿಕೆ ಆಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಲ್ಲದೇ ಒಂದು ಕಡೆ ಜನರಿಗೆ ಗ್ಯಾರಂಟಿಗಳನ್ನ ಕೊಟ್ಟು ಇನ್ನೊಂದು ಕಡೆ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದರು. ಇನ್ನು ಸರ್ಕಾರದ ವಿರುದ್ದ ದಿಕ್ಕಾರಗಳನ್ನ ಕೂಗಿ ಆಕ್ರೋಶ ಹೊರ ಹಾಕಿದರು.
ಇದನ್ನೂ ಓದಿ:ತಪತೇಶ್ವರ ಬೆಟ್ಟಕ್ಕೆ ಪ್ರವಾಸಕ್ಕೆ ತೆರಳಿದ್ದ ಮಕ್ಕಳ ಮೇಲೆ ಹೆಜ್ಜೇನು ದಾಳಿ.. ಆಸ್ಪತ್ರೆಗೆ ದಾಖಲು