ತಪತೇಶ್ವರ ಬೆಟ್ಟಕ್ಕೆ ಪ್ರವಾಸಕ್ಕೆ ತೆರಳಿದ್ದ ಮಕ್ಕಳ ಮೇಲೆ ಹೆಜ್ಜೇನು ದಾಳಿ.. ಆಸ್ಪತ್ರೆಗೆ ದಾಖಲು - ಚಿಂತಾಮಣಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ
ಚಿಕ್ಕಬಳ್ಳಾಪುರ :ಒಂದು ದಿನದ ಪ್ರವಾಸಕ್ಕೆ ತೆರಳಿದ್ದ ಶಾಲಾ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ಮಾಡಿರುವ ಘಟನೆ ಚಿಂತಾಮಣಿ ತಾಲೂಕು ಕೆಂದನಹಳ್ಳಿಗ್ರಾಮದ ಬಳಿಯ ತಪತೇಶ್ವರ ಬೆಟ್ಟದಲ್ಲಿ ನಡೆದಿದೆ.
ಶಾಲಾ ಮಕ್ಕಳ ಮೇಲೆ ದಾಳಿ ನಡೆಸಿದ ಹೆಜ್ಜೇನು: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಬಿಜಿ ವೇಣು ಶಾಲೆಯ 70 ಮಕ್ಕಳು ಶಿಕ್ಷಕರೊಂದಿಗೆ ಚಿಂತಾಮಣಿ ತಾಲೂಕು ಕೆಂದನಹಳ್ಳಿ ಬಳಿಯ ತಪತೇಶ್ವರ ಬೆಟ್ಟಕ್ಕೆ ಹೋಗಿದ್ದು, ಬೆಟ್ಟದ ಮೇಲೆ ಪ್ರವಾಸ ಮುಗಿಸಿ ಅಲ್ಲಿಂದ ಇಳಿಯುತ್ತಿದ್ದ ವೇಳೆ ಶಿಕ್ಷಕರು ಸೇರಿದಂತೆ ಶಾಲಾ ಮಕ್ಕಳ ಮೇಲೆ ದಾಳಿ ಮಾಡಿರುವ ಹೆಜ್ಜೇನು ಮನ ಬಂದಂತೆ 30 ಕ್ಕೂ ಹೆಚ್ಚು ಮಕ್ಕಳನ್ನು ಕಚ್ಚಿ ಗಾಯಗೊಳಿಸಿದ್ದವು.
ಶಿಕ್ಷಕ ನವೀನ್ ಸ್ಥಿತಿ ಗಂಭೀರ: ಈ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕೆಂದನಹಳ್ಳಿ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮಕ್ಕಳನ್ನು ರಕ್ಷಣೆ ಮಾಡಿ ಆ್ಯಂಬುಲೆನ್ಸ್ ಮೂಲಕ ಚಿಂತಾಮಣಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಹೆಜ್ಜೇನು ದಾಳಿ ವೇಳೆ ಮಕ್ಕಳನ್ನು ರಕ್ಷಣೆ ಮಾಡಲು ಮುಂದಾದ ಶಿಕ್ಷಕ ನವೀನ್ ಅವರಿಗೆ ಹೆಚ್ಚಾಗಿ ಜೇನು ನೋಣುಗಳು ದಾಳಿ ಮಾಡಿರುವ ಕಾರಣ ಶಿಕ್ಷಕನ ಸ್ಥಿತಿ ಸ್ವಲ್ಪ ಮಟ್ಟಿಗೆ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸ ಆಯೋಜನೆ: ತಪತೇಶ್ವರ ಬೆಟ್ಟ ಸಾಕಷ್ಟು ಇತಿಹಾಸವನ್ನು ಹೊಂದಿದ್ದು, ನಿಷ್ಟೆಯಿಂದ ಬೆಟ್ಟಕ್ಕೆ ಬರಬೇಕಾಗಿದೆ. ಜೊತೆಗೆ ಬೆಟ್ಟದ ಮೇಲೆ ಟಿಪ್ಪು ಸುಲ್ತಾನ್ ಕಾಲದ ಸಾಕಷ್ಟು ಕುರುಹುಗಳು ಇವೆ. ಇದರಿಂದ ಬೆಟ್ಟದ ಮೇಲಿನ ಪ್ರಕೃತಿ ಹಾಗೂ ಪೂರ್ವ ಕಾಲದ ಕಟ್ಟಡಗಳನ್ನು ವೀಕ್ಷಣೆ ಮಾಡಲು ಇಲ್ಲಿಗೆ ಬರುತ್ತಾರೆ. ಈ ಕಾರಣಕ್ಕಾಗಿಯೇ ಮಕ್ಕಳನ್ನು ಒಂದು ದಿನದ ಮಟ್ಟಿಗೆ ಪ್ರಾಕೃತಿಕ ಸೌಂದರ್ಯದ ಸೊಬಗನ್ನು ಸವಿಯಲು ಪ್ರವಾಸ ಆಯೋಜನೆ ಮಾಡಲಾಗಿತ್ತು.
ಇದನ್ನೂ ಓದಿ :ಹೆಜ್ಜೇನು ದಾಳಿ: ಪೊಲೀಸ್ ಪಬ್ಲಿಕ್ ಶಾಲೆಯ ಮಕ್ಕಳನ್ನು ರಕ್ಷಿಸಿದ ಅಗ್ನಿಶಾಮ ದಳ