ಅಯೋಧ್ಯಾದಿಂದ ತಂದ ಮಂತ್ರಾಕ್ಷತೆ ಪುತ್ತೂರು ನಗರದಿಂದ ಉಪವಸತಿ ಕೇಂದ್ರಕ್ಕೆ ವಿತರಣೆ - ರಾಮನಾಮ ತಾರಕ ಜಪ
Published : Dec 11, 2023, 10:57 PM IST
ಪುತ್ತೂರು : ಶ್ರೀ ರಾಮಜನ್ಮಭೂಮಿ ಅಯೋಧ್ಯಾದಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಯನ್ನು, ಪುತ್ತೂರು ನಗರದಿಂದ ಉಪವಸತಿ ಕೇಂದ್ರಕ್ಕೆ ವಿತರಿಸುವ ಕಾರ್ಯಕ್ರಮ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆವರಣದಲ್ಲಿ ನಡೆಯಿತು.
ಪುತ್ತೂರಿನ 45 ಉಪವಸತಿ ಕೇಂದ್ರದ ಪ್ರಮುಖರಿಗೆ ಪವಿತ್ರ ಅಕ್ಷತೆಯನ್ನು ಗುರುಪುರ ವಜ್ರದೇಹಿ ಮಠದ ರಾಜಶೇಖರನಂದ ಸ್ವಾಮೀಜಿಯವರು ವಿತರಿಸಿದರು. ಬಳಿಕ ಮಾತನಾಡಿದ ಸ್ವಾಮೀಜಿಯವರು, ಅಯೋಧ್ಯಾದಲ್ಲಿ ಭವ್ಯವಾದ ಶ್ರೀರಾಮನ ಮಂದಿರ ನಿರ್ಮಾಣಗೊಂಡು ಪ್ರತಿಷ್ಠಾಪನೆಗೊಳ್ಳುವ ದಿನ ಭಾರತದ ಬಹುದೊಡ್ಡ ಪ್ರಜಾಪ್ರಭುತ್ವ ದಿನವಾಗಿದೆ. ಈ ದಿನವನ್ನು ಹಿಂದೂಗಳು ಪವಿತ್ರ ದಿನವನ್ನಾಗಿ ಆಚರಿಸಬೇಕು ಎಂದರು.
ಮೊದಲ ಮೋಕ್ಷದಾಮವೇ ಅಯೋಧ್ಯಾ. ರಾಮ ಎಂಬ ಶಬ್ದದಿಂದ ಆನಂದವಾಗುತ್ತದೆ. ಈಗ ಯಾವುದೇ ಸ್ವಾತಂತ್ರ್ಯ ಸಂಗ್ರಾಮ, ಹೋರಾಟಗಳಿಲ್ಲದೇ ಮಂದಿರ ನಿರ್ಮಾಣಗೊಂಡಿದೆ. ಎಲ್ಲ ಮನೆಗಳಲ್ಲಿ ರಾಮನಾಮ ತಾರಕ ಜಪವಾಗಬೇಕು. ಅಯೋಧ್ಯೆಗೆ ಎಲ್ಲರಿಗೂ ಹೋಗಲು ಸಾಧ್ಯವಿಲ್ಲ. ಅದಕ್ಕಾಗಿ ಕೆಲವೊಂದು ನಿಯಮ ರೂಪುರೇಷೆಗಳಂತೆ ಪಾಲ್ಗೊಳ್ಳಬೇಕು. ಅಯೋಧ್ಯೆಯ ರಾಮನಿಗೂ ಪುತ್ತೂರಿಗೂ ಕೊಂಡಿಯಾಗಬೇಕೆಂಬ ಉದ್ದೇಶದಿಂದ ಅಯೋಧ್ಯೆಯಲ್ಲಿ ಆರಾಧಿಸಿ, ಸಹಸ್ರ ನಾಮಮಂತ್ರಗಳಿಂದ ಉತ್ಪ್ರೇಕ್ಷಿತ ಅಕ್ಷತೆಯನ್ನು ಪ್ರತಿ ಮನೆಗಳಿಗೂ ತಲುಪಿಸಲಾಗುತ್ತಿದೆ. ರಾಮ ಮಂದಿರ ನಿರ್ಮಾಣವಾಗುವ ಮೂಲಕ ನೈಜವಾದ ಹಿಂದೂ ಸಮಾಜ ನಿರ್ಮಾಣವಾಗಲಿದೆ.
ಪುತ್ತೂರು ನಗರದಿಂದ 45 ಉಪವಸತಿ ಕೇಂದ್ರಗಳ ಪ್ರಮುಖರಿಗೆ ರಾಜಶೇಖರಾನಂದ ಸ್ವಾಮೀಜಿಯವರು ಅಕ್ಷತೆ ತುಂಬಿದ ಕಲಶವನ್ನು ವಿತರಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ನಗರ ಸಂಘ ಚಾಲಕ ಶಿವಪ್ರಸಾದ್ ಇ, ವಿಶ್ವಹಿಂದು ಪರಿಷತ್ ಕ್ಷೇತ್ರಿಯ ಸತ್ಸಂಗ ಪ್ರಮುಖ ಮಹಾಬಲೇಶ್ವರ ಹೆಗ್ಡೆ, ಮುರಳಿಕೃಷ್ಣ ಹಸಂತಡ್ಕ, ವಿಶ್ವಹಿಂದು ಪರಿಷತ್ ಪುತ್ತೂರು ಪ್ರಖಂಡದ ಅಧ್ಯಕ್ಷ ಜನಾರ್ದನ ಬೆಟ್ಟ, ಯುವರಾಜ್ ಪೆರಿಯತ್ತೋಡಿ, ಸಂತೋಷ್ ಬೋನಂತಾಯಿ, ವಿಶಾಖ್ ಸಸಿಹಿತ್ಲು, ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ :ದಕ್ಷಿಣ ಕನ್ನಡ: ಪುತ್ತೂರು ಪ್ರವೇಶಿಸಿದ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಮಂದಿರದ ಅಕ್ಷತೆ