ಕಾರವಾರದ ಟನಲ್ ಬಳಿ ಗುಡ್ಡ ಕುಸಿತ: ಹೆದ್ದಾರಿ ಸಂಚಾರ ಅಸ್ತವ್ಯಸ್ತ- ವಿಡಿಯೋ - ಉತ್ತರಕನ್ನಡ ಜಿಲ್ಲೆಗೆ ಯಲ್ಲೋ ಅಲರ್ಟ್ ಘೋಷಣೆ
ಕಾರವಾರ: ಜಿಲ್ಲೆಯ ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಅಬ್ಬರಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಿಸಿದ ಒಂದು ಬದಿಯ ಸುರಂಗ ಮಾರ್ಗದ ತುದಿಯಲ್ಲಿ ಮಣ್ಣುಸಹಿತ ಸಣ್ಣ ಬಂಡೆಗಲ್ಲುಗಳು ಹೆದ್ದಾರಿಗೆ ಉರುಳಿಬಿದ್ದಿವೆ. ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಯಿತು.
ಐಆರ್ಬಿ ಸಿಬ್ಬಂದಿ ಸುರಂಗದ ಬಳಿ ಮಣ್ಣು ಕುಸಿಯುತ್ತಿರುವ ಪ್ರದೇಶದಲ್ಲಿ ಎರಡೂ ಬದಿ ಬ್ಯಾರಿಕೇಡ್ ಹಾಕಿ ಸುರಕ್ಷತೆ ಕೈಗೊಂಡರು. ನಿರಂತರವಾಗಿ ಮಣ್ಣು, ಕಲ್ಲು ಬೀಳುತ್ತಿರುವ ಕಾರಣ ಸ್ಥಳದಲ್ಲೇ ಸಿಬ್ಬಂದಿ ನಿಂತು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕಾಮಗಾರಿ ನಡೆಸಿದ ಪ್ರದೇಶದ ಟನಲ್ ಬಳಿಯ ಮಣ್ಣನ್ನು ಜೆಸಿಬಿ ಮೂಲಕ ಐಆರ್ಬಿ ಸಿಬ್ಬಂದಿ ತೆರವುಗೊಳಿಸಿದರು. ಮಣ್ಣು ಗಂಟೆಗಟ್ಟಲೆ ಬೀಳುತ್ತಿದ್ದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಿಬ್ಬಂದಿ ನಿಯೋಜಿಸಿ ಜೆಸಿಬಿ ಮೂಲಕ ತೆರವು ಕಾರ್ಯ ನಡೆದಿದೆ.
ಯಲ್ಲೋ ಅಲರ್ಟ್ ಘೋಷಣೆ:ಜಿಲ್ಲೆಯ ಕರಾವಳಿಯ ಬಹುತೇಕ ಎಲ್ಲ ತಾಲೂಕುಗಳಲ್ಲಿಯೂ ಉತ್ತಮ ಮಳೆಯಾಗಿದೆ. ಘಟ್ಟದ ಮೇಲ್ಬಾಗ ಪ್ರದೇಶಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲಿ ಸಾಧಾರಣ ಮಳೆಯಾಗಿದೆ. ಉಳಿದೆಡೆ ಬಿಸಿಲು ಹಾಗೂ ಮೋಡದೊಂದಿಗೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದ್ದು ಹವಾಮಾನ ಇಲಾಖೆ ಉತ್ತರಕನ್ನಡ ಜಿಲ್ಲೆಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.