ಸಿಎಂ ಸಿದ್ದರಾಮಯ್ಯಗೆ ಧನ್ಯವಾದ, ಮತ್ತೆ ನಾನು ಕಾಲೇಜಿಗೆ ಹೋಗ್ತೇನೆ: ಮುಸ್ಕಾನ್ - ಹಿಜಾಬ್ ವಿರೋಧ
Published : Dec 23, 2023, 10:20 PM IST
ಮಂಡ್ಯ: ಕಳೆದ ವರ್ಷ ಫೆಬ್ರುವರಿಯಲ್ಲಿ ಕಾಲೇಜು ಪ್ರವೇಶ ಮಾಡುತ್ತಿದ್ದಾಗ ಹಿಜಾಬ್ ವಿರೋಧ ವ್ಯಕ್ತಪಡಿಸುತ್ತಿದ್ದ ಗುಂಪನ್ನು ಎದುರಿಸಿ ದಿಟ್ಟತನ ಮೆರೆದಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಜಾಬ್ ನಿಷೇಧವನ್ನು ಹಿಂಪಡೆಯುವುದಾಗಿ ಹೇಳಿರುವುದನ್ನು ನಾನು ಸ್ವಾಗತಿಸುವೆ. ನಮ್ಮ ಹಕ್ಕನ್ನು ನಮಗೆ ವಾಪಸ್ ಕೊಡುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಧನ್ಯವಾದ ಎಂದಿದ್ದಾರೆ.
ಮುಖ್ಯಮಂತ್ರಿಗಳು ನಮ್ಮ ಸಂಸ್ಕೃತಿಯನ್ನು ಬೆಂಬಲಿಸಿದ್ದಾರೆ. ನಾವು ಈ ಮುನ್ನ ಅಣ್ಣ-ತಮ್ಮಂದಿರ ರೀತಿ ಕಾಲೇಜಿಗೆ ಹೋಗಿ ಓದುತ್ತಿದ್ದೆವು. ಅದೇ ರೀತಿ ಹೋಗಬೇಕಿದೆ. ನಾನು ಮತ್ತೆ ಕಾಲೇಜಿಗೆ ಹೋಗುವೆ. ಹಿಜಾಬ್ ನಮ್ಮ ಸಂಸ್ಕೃತಿ. ನಮ್ಮ ಹಕ್ಕು ವಾಪಸ್ ಬರುತ್ತೆ ಎಂಬ ನಂಬಿಕೆ ಇತ್ತು. ಈಗ ಎಲ್ಲರೂ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿದೆ. ನನ್ನ ಶಿಕ್ಷಣವನ್ನು ಅದೇ ಕಾಲೇಜಿನಲ್ಲಿ ಮುಂದುವರೆಸುವೆ. ಹಿಜಾಬ್ ವಿವಾದದಿಂದ ಅನೇಕ ಹುಡುಗಿಯರು ಶಿಕ್ಷಣದಿಂದ ವಂಚಿತರಾಗಿದ್ದರು. ನಾನು ಸಹ ಒಂದು ವರ್ಷ ಕಾಲೇಜಿಗೆ ಹೋಗಿರಲಿಲ್ಲ. ಈಗ ಎಲ್ಲರೂ ಬಂದು ಪರೀಕ್ಷೆ ಬರೆಯಬಹುದು. ಶಿಕ್ಷಣದ ವಿಚಾರದಲ್ಲಿ ರಾಜಕೀಯ ಇರಬಾರದು ಎಂದು ಮುಸ್ಕಾನ್ ಮನವಿ ಮಾಡಿದರು.
ಕಳೆದ ವರ್ಷ ಫೆಬ್ರುವರಿಯಲ್ಲಿ ಮುಸ್ಕಾನ್ ಕಾಲೇಜಿಗೆ ಪ್ರವೇಶಿಸುವ ವೇಳೆ ಹಿಜಾಬ್ಗೆ ವಿರೋಧ ವ್ಯಕ್ತಪಡಿಸಿ ಗುಂಪೊಂದು ಜೈ ಶ್ರೀರಾಮ್ ಎಂದು ಕೂಗಿತ್ತು. ಆಗ ಮುಸ್ಕಾನ್, ಅಲ್ಲಾ ಹು ಅಕ್ಬರ್ ಎಂದು ಕೂಗುವ ಮೂಲಕ ಗಮನ ಸೆಳೆದಿದ್ದರು.
ಮಕ್ಕಳಿಗೆ ಬಾರಿ ಸಮಸ್ಯೆಯಾಯ್ತು:ಮುಸ್ಕಾನ್ ತಂದೆ ಮೊಹಮ್ಮದ್ ಹುಸೇನ್ ಮಾತನಾಡಿ, ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಅಹಮದ್ ಖಾನ್ ಎಲ್ಲ ಶಾಸಕರಿಗೆ ಧನ್ಯವಾದ. ಸುಪ್ರೀಂ ಕೋರ್ಟ್ನಲ್ಲಿಯೂ ನಮ್ಮ ಪರ ತೀರ್ಪು ಬರುವ ಭರವಸೆ ಇದೆ. ಈಗ ದೇವರು ಒಳ್ಳೆ ಕೆಲಸ ಮಾಡಿದ್ದಾನೆ. ಮುಂದೆಯು ದೇವರು ಒಳ್ಳೆಯದು ಮಾಡ್ತಾರೆ ಎಂದರು.
ಒಂದು ವರ್ಷ ಶಿಕ್ಷಣ ಪಡೆಯೋಕೆ ಮಕ್ಕಳಿಗೆ ಬಾರಿ ಸಮಸ್ಯೆಯಾಯ್ತು. ಬೇರೆ ಕಾಲೇಜಿನಲ್ಲಿ ಸೇರಬೇಕು ಎಂದರೆ ಮತ್ತೆ ಮೊದಲಿಂದ ಓದಬೇಕಿತ್ತು. ಈಗ ಮಕ್ಕಳು ಶಿಕ್ಷಣ ಮುಂದುವರೆಸಬಹುದು. ನಮ್ಮ ಧರ್ಮದಲ್ಲಿ ಹಿಜಾಬ್ ಧರಿಸುತ್ತಾ ಬಂದಿದ್ದೇವೆ. ಈಗ ಹಿಜಾಬ್ ಬೇಡ ಅನ್ನೋದು ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಸಾಹೇಬ್ರುಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಹಿಜಾಬ್ ನಿಷೇಧ ಹಿಂತೆಗೆದುಕೊಳ್ಳುತ್ತೇವೆ: ಸಿಎಂ ಸಿದ್ದರಾಮಯ್ಯ