ಹಿಡಕಲ್ ಡ್ಯಾಂನಿಂದ ಭೂಮಿ ಕಳೆದುಕೊಂಡ ರೈತರಿಂದ ನೀರಾವರಿ ಇಲಾಖೆಗೆ ಮುತ್ತಿಗೆ - ಮಾಸ್ತಿಹೊಳಿ ಗ್ರಾಮ
Published : Dec 21, 2023, 7:29 PM IST
ಬೆಳಗಾವಿ:ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡ ಹುಕ್ಕೇರಿ ತಾಲ್ಲೂಕಿನ ಮಾಸ್ತಿಹೊಳಿ ಮತ್ತು ನರಸಿಂಗಪುರ ಗ್ರಾಮಗಳ ಜನರು ಪರಿಹಾರಕ್ಕೆ ಒತ್ತಾಯಿಸಿ ನಗರದ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಕಚೇರಿಗೆ ಇಂದು ಮುತ್ತಿಗೆ ಹಾಕಿದರು.
ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಹಿಡಕಲ್ ಡ್ಯಾಂನ ಹಿನ್ನೀರಿನಿಂದಾಗಿ 45 ವರ್ಷಗಳ ಹಿಂದೆ ಮಾಸ್ತಿಹೊಳಿ ಗ್ರಾಮದ 2800 ಎಕರೆ ಜಮೀನು ಮಳುಗಡೆಯಾಗಿತ್ತು. ಇದರಲ್ಲಿ 2400 ಎಕರೆ ಜಮೀನಿಗೆ ಪರಿಹಾರ ನೀಡಲಾಗಿದೆ. ಉಳಿದ 394 ಎಕರೆ 26 ಗುಂಟೆ ಜಮೀನಿಗೆ ಪರಿಹಾರ ಸಿಕ್ಕಿಲ್ಲ. ಪರಿಹಾರ ನೀಡುವಂತೆ ಎರಡು ವರ್ಷಗಳ ಹಿಂದೆ ಹೈಕೋರ್ಟ್ ಆದೇಶಿಸಿದ್ದರೂ ನೀರಾವರಿ ಅಧಿಕಾರಿಗಳು ಮಾತ್ರ ಪರಿಹಾರ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಿಮ್ಮದು ಹಳೆ ಜಮೀನು. ಅದಕ್ಕೆ ಪರಿಹಾರ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾದರೆ ನಮ್ಮ ಹೊಲದಲ್ಲಿ ಹಿಡಕಲ್ ಡ್ಯಾಮ್ ನೀರು ನಿಲ್ಲಿಸಬೇಡಿ. ನಮ್ಮ ಹೊಲ ನಮಗೆ ಬಿಟ್ಟು ಕೊಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾಳೇಶ್, 2021ರ ಸೆಪ್ಟೆಂಬರ್ ತಿಂಗಳಲ್ಲಿ ರೈತರಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಅಲ್ಲದೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ಪತ್ರ ಬರೆದರೂ ಕೂಡ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಹಿಡಕಲ್ ಜಲಾಶಯದ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಆದಷ್ಟು ಬೇಗ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ:ಕೋವಿಡ್ ಹೊಸ ತಳಿ ಜೆಎನ್.1 ಬಗ್ಗೆ ಆತಂಕ ಅಗತ್ಯವಿಲ್ಲ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್