ಜಮ್ಮು ಕಾಶ್ಮೀರ ಕಣಿವೆ ಪ್ರದೇಶಗಳಲ್ಲಿ ಭಾರಿ ಹಿಮಪಾತ: ಜನಜೀವನ ಅಸ್ತವ್ಯಸ್ತ - ಶ್ರೀನಗರದಲ್ಲಿ ಕನಿಷ್ಠ ರಾತ್ರಿ ತಾಪಮಾನ
ಶ್ರೀನಗರ: ಶನಿವಾರ ಬೆಳಗ್ಗೆಯಿಂದಲೇ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮತ್ತು ತ್ರಾಲ್ ಉಪಜಿಲ್ಲೆಗಳು ಸೇರಿದಂತೆ ಬಹುತೇಕ ತಗ್ಗು ಪ್ರದೇಶ ಮತ್ತು ಎತ್ತರದ ಪ್ರದೇಶಗಳಲ್ಲಿ ಭಾರಿ ಹಿಮಪಾತ ಆರಂಭವಾಗಿದೆ. ಶ್ರೀನಗರ ಸೇರಿದಂತೆ ಕಣಿವೆಯ ಇತರ ಪ್ರದೇಶಗಳಲ್ಲೂ ಬೆಳಗ್ಗೆಯಿಂದಲೇ ಹಿಮ ಬೀಳಲು ಪ್ರಾರಂಭವಾಗಿದೆ. ಹಿಮಪಾತದಿಂದಾಗಿ ಉಂಟಾಗುವ ಪರಿಸ್ಥಿತಿಯನ್ನು ನಿಯತ್ರಿಸಲು ಆಡಳಿತ ಈಗಾಗಲೇ ತ್ರಾಲ್‌ನಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
ಫೆ. 9 ಮತ್ತು 11ರ ನಡುವೆ ಬಯಲು ಪ್ರದೇಶದಲ್ಲಿ ಲಘು ಹಿಮಪಾತ ಹಾಗೂ ಎತ್ತರದ ಪ್ರದೇಶದಲ್ಲಿ ಭಾರೀ ಹಿಮಪಾತವಾಗಬಹುದು ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿತ್ತು. ಫೆಬ್ರವರಿ 11ರ ನಂತರವೂ ಒಂದು ವಾರದವರೆಗೆ ಹವಾಮಾನ ಬದಲಾಗುವ ನಿರೀಕ್ಷೆಯಿದೆ. ಹವಾಮಾನ ವೈಪರೀತ್ಯವಾಗುತ್ತಿರುವ ಹಿನ್ನೆಲೆ ಜನರು ಎತ್ತರದ ಪ್ರದೇಶಗಳಲ್ಲಿ ಪ್ರಯಾಣಿಸದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ವರದಿಗಳ ಪ್ರಕಾರ ಮೇಲ್ಭಾಗದಲ್ಲಿ ಭಾರೀ ಹಿಮಪಾತ ಮುಂದುವರಿದಿದ್ದು, ತಗ್ಗು ಪ್ರದೇಶಗಳಲ್ಲಿ ಲಘು ಹಿಮಪಾತ ಮುಂದುವರಿದಿದ್ದು, ಚಳಿ ಹೆಚ್ಚಿದ್ದು, ಹಿಮಪಾತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಎತ್ತರದ ಪ್ರದೇಶಗಳಲ್ಲಿ ಅರ್ಧ ಅಡಿಗೂ ಹೆಚ್ಚು ಹಿಮ ಶೇಖರಣೆಯಾಗಿದೆ. ತ್ರಾಲ್ನ ಬಟಾಡಿನ್‌ನ ಬಾರಾಮುಲ್ಲಾದ ವಿವಿಧ ಪ್ರದೇಶಗಳಲ್ಲಿ ಹಿಮಪಾತ ಮುಂದುವರಿದಿದೆ. ರಫಿಯಾಬಾದ್, ಜಂಗಿರ್, ಓರಿ, ಜನಪ್ರಿಯ ಮತ್ತು ಪ್ರಸಿದ್ಧ ಪ್ರವಾಸಿ ತಾಣ, ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾ ಸ್ಪರ್ಧೆ ನಡೆಯುತ್ತಿರುವ ಗುಲ್ಮಾರ್ಗ್‌ನಲ್ಲಿ ಸಹ ಹಿಮಪಾತವಾಗುತ್ತಿದ್ದು, ಇದರಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ.
ಶ್ರೀನಗರದಲ್ಲಿ ಕನಿಷ್ಠ ರಾತ್ರಿ ತಾಪಮಾನ 0.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ಮೈನಸ್ 2.4 ಡಿಗ್ರಿ ಮತ್ತು ಗುಲ್ಮಾರ್ಗ್‌ನಲ್ಲಿ ಮೈನಸ್ 1.0 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಾಜ್‌ಗುಂಡ್‌ನಲ್ಲಿ ಕನಿಷ್ಠ ರಾತ್ರಿ ತಾಪಮಾನ ಮೈನಸ್ 1.1 ಡಿಗ್ರಿ ಮತ್ತು ಕೊಕರ್ನಾಗ್‌ನಲ್ಲಿ 3.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಜಮ್ಮುವಿನಲ್ಲಿ ರಾತ್ರಿಯ ಕನಿಷ್ಠ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬನ್ಹಾಲ್ 0.1 ಡಿಗ್ರಿ ಸೆಲ್ಸಿಯಸ್, ಕತ್ರಾದಲ್ಲಿ 2.5 ಡಿಗ್ರಿ ಸೆಲ್ಸಿಯಸ್ ಮತ್ತು ಭದರ್ವಾದಲ್ಲಿ ರಾತ್ರಿಯಲ್ಲಿ ಮೈನಸ್ 2.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇದನ್ನೂ ನೋಡಿ:Watch ಸೋನಾಮಾರ್ಗ್‌ನಲ್ಲಿ ಕಣಿವೆಯಲ್ಲಿ ಹಿಮಪ್ರವಾಹ!