ಮಲೆನಾಡಿನಲ್ಲಿ ಮಳೆಗಾಗಿ ಪೂಜೆ ಸಲ್ಲಿಸುತ್ತಿದ್ದ ವೇಳೆಯೇ ಸುರಿದ ಧಾರಾಕಾರ ಮಳೆ- ವಿಡಿಯೋ - ದೇವಾಲಯದ ಬಳಿಯೇ ಮುದ್ದೆ ತಯಾರಿಸಿ ದೇವರಿಗೆ ನೈವೇದ್ಯ
ಶಿವಮೊಗ್ಗ:ಮಲೆನಾಡಿನಲ್ಲಿ ಮಳೆಗಾಗಿ ಪೂಜೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಭಾರಿ ಮಳೆ ಸುರಿದಿರುವ ಅಪರೂಪದ ಘಟನೆ ನಡೆಯಿತು. ಜನರು ಖುಷಿಯಿಂದ ಕೇಕೆ ಹಾಕಿ, ದೇವಾಲಯದ ಗಂಟೆ ಬಡಿದು ಸಂಭ್ರಮಿಸಿದ್ದಾರೆ. ಶಿವಮೊಗ್ಗ ತಾಲೂಕಿನ ಮೇಲಿನ ಹನಸವಾಡಿ ಗ್ರಾಮದಲ್ಲಿ ಘಟನೆ ನಡೆಯಿತು. ಮಳೆಗಾಗಿ ಪೂಜೆ ಸಲ್ಲಿಸಲು ಹಾಕಿದ್ದ ಶಾಮಿಯಾನವೂ ಮಳೆಗುರುಳಿದೆ.
ನಿನ್ನೆ ರಾತ್ರಿಯಿಂದ ಮಳೆಗಾಗಿ ಪ್ರಾರ್ಥಿಸಿ ಹನಸವಾಡಿ ಗ್ರಾಮದ ಕಪಿಲೇಶ್ವರ ಸ್ವಾಮಿಯ ದೇವಾಲಯದಲ್ಲಿ ಭಜನೆ, ಬೆಳಿಗ್ಗೆ ಗಂಗಾಪೂಜೆ, ಅಭಿಷೇಕ ಹಾಗೂ ಮುದ್ದೆ ಪಾರಾವ್ ಹೆಸರಿನಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿತ್ತು. ದೇವಾಲಯದ ಬಳಿಯೇ ಮುದ್ದೆ ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಲಾಗಿದೆ. ಆ ಬಳಿಕ ಗ್ರಾಮಸ್ಥರೆಲ್ಲರೂ ದೇವಾಲಯದಲ್ಲಿಯೇ ಪ್ರಸಾದ, ಊಟ ಸ್ವೀಕರಿಸಿದ್ದಾರೆ.
ಇದಾದ ಬಳಿಕ ಭಾರಿ ಮಳೆ ಆಗಿದೆ. ಬರದ ಸಂದರ್ಭದಲ್ಲಿ ಹಿಂದಿನಿಂದಲೂ ಈ ರೀತಿಯ ವಿಶೇಷ ಸಂಪ್ರದಾಯ ಆಚರಿಸಿಕೊಂಡು ಬಂದಿರುವ ಊರ ಗ್ರಾಮಸ್ಥರು, ಇದೀಗ ಪೂಜೆಯ ವೇಳೆಯೇ ಮಳೆ ಸುರಿದಿದ್ದಕ್ಕೆ ಸಂತಸಗೊಂಡಿದ್ದಾರೆ.
ಇದನ್ನೂ ಓದಿ :ಶಿವಮೊಗ್ಗದಲ್ಲಿ ಭಾರಿ ಮಳೆ : ರೈಲು ನಿಲ್ದಾಣದಲ್ಲಿ ನೀರು ಸೋರಿಕೆ.. ರಸ್ತೆಗಳು ಜಲಾವೃತ