ಮಿಚೌಂಗ್ ಚಂಡಮಾರುತ: ಚೆನ್ನೈನ ಹಲವು ಪ್ರದೇಶಗಳು ಜಲಾವೃತ-ವಿಡಿಯೋ - ಮಳೆ
Published : Dec 4, 2023, 9:59 AM IST
ಚೆನ್ನೈ(ತಮಿಳುನಾಡು): ದಕ್ಷಿಣ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಉತ್ತರ ಕರಾವಳಿಯಲ್ಲಿ ಮಿಚೌಂಗ್ ಚಂಡಮಾರುತ ತೀವ್ರಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಚೆನ್ನೈನ ಹಲವು ಭಾಗಗಳಲ್ಲಿ ಬಲವಾದ ಗಾಳಿಯೊಂದಿಗೆ ಅಧಿಕ ಮಳೆಯಾಗುತ್ತಿದೆ. ಪರಿಣಾಮ, ನಗರದ ಕೆಲವು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಚೆನ್ನೈನ ಹವಾಮಾನ ಕೇಂದ್ರವು ಇಂದು ಬೆಳಿಗ್ಗೆ 7 ಗಂಟೆಗೆ ತಮಿಳುನಾಡಿನ ತಿರುವಳ್ಳೂರು, ಚೆನ್ನೈ, ಚೆಂಗಲ್‌ಪಟ್ಟು ಮತ್ತು ಕಾಂಚೀಪುರಂ ಜಿಲ್ಲೆಗಳ ಹಲವೆಡೆ ಗುಡುಗು ಮತ್ತು ಮಿಂಚುಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಹಾಗೆಯೇ, ಮುಂದಿನ ಮೂರು ಗಂಟೆಗಳಲ್ಲಿ ತಮಿಳುನಾಡು ಜಿಲ್ಲೆಯ ರಾಣಿಪ್ಪೆಟ್ಟೈ, ತಿರುವಣ್ಣಾಮಲೈ, ವಿಲ್ಲುಪುರಂ, ಕಡಲೂರು, ಮೈಲಾಡುತುರೈ, ತಂಜಾವೂರು, ಅರಿಯಲೂರ್, ಪೆರಂಬಲೂರ್, ಕಲ್ಲಕುರಿಚ್ಚಿ, ವೆಲ್ಲೂರು, ತಿರುಪತ್ತೂರು, ಧರ್ಮಪುರಿ, ಕೃಷ್ಣಗಿರಿ ಸೇಲಂ, ನಮಕ್ಕಲ್, ತಿರುಚಿರಾಪಳ್ಳಿ, ತಂಜಾವೂರು, ತಿರುವಾರೂರ್ ಮತ್ತು ನಾಗಪಟ್ಟಣಂ ಜಿಲ್ಲೆಯಲ್ಲಿ ಗುಡುಗು, ಸಿಡಿಲುಸಹಿತ ಸಾಧಾರಣ ಮಳೆಯಾಗಲಿದೆ ಎಂಬ ಮುನ್ಸೂಚನೆ ಕೊಟ್ಟಿದೆ.
ಭಾರಿ ಮಳೆ ಮತ್ತು ಜಲಾವೃತದಿಂದಾಗಿ ಎಲ್ಲಾ ಚೆನ್ನೈ ಉಪನಗರ ವಿಭಾಗಗಳಲ್ಲಿನ ಉಪನಗರ ರೈಲು ಸೇವೆಗಳನ್ನು ಇಂದು 08 ಗಂಟೆಗಳವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಹೇಳಿದೆ. ನಗರದ ಮಧುರವೋಯಲ್, ಪೋರೂರ್, ಸಾಲಿಗರಾಮಮ್ ಮತ್ತು ವಲಸರವಕ್ಕಂ ಸೇರಿದಂತೆ ಹಲವು ಭಾಗಗಳಲ್ಲಿ ನೀರು ನಿಂತಿದೆ. ಹಲವೆಡೆ ಜೋರು ಗಾಳಿಗೆ ಮರಗಳು ಧರೆಗುರುಳಿವೆ.
ಇದನ್ನೂ ಓದಿ:ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ ಮಿಚೌಂಗ್ ಚಂಡಮಾರುತ: ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ