ಮಹಾಪ್ರವಾಹಕ್ಕೆ 100 ವರ್ಷ ಹಳೇಯ ಸೇತುವೆಗೆ ಹಾನಿ, ಹತ್ತಾರು ವಾಹನಗಳು ನೀರುಪಾಲು- ವಿಡಿಯೋ - ಈಟಿವಿ ಭಾರತ ಕನ್ನಡ
ಮಂಡಿ (ಹಿಮಾಚಲ ಪ್ರದೇಶ):ಹಿಮಾಚಲ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ರಾಜ್ಯದಲ್ಲಿ ಹಲವು ಅನಾಹುತಗಳನ್ನು ಉಂಟುಮಾಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ, ಅಂದಾಜು 100 ವರ್ಷಗಳಷ್ಟು ಹಳೇಯ ಐತಿಹಾಸಿಕ ಸೇತುವೆ ಪ್ರವಾಹದಿಂದ ತೀವ್ರ ಹಾನಿಗೊಳಗಾಗಿದೆ.
ಮಂಡಿ ಜಿಲ್ಲೆಯಲ್ಲಿರುವ ಈ ಸೇತುವೆ ಬಿಯಾಸ್ ಹಾಗೂ ಸುಕೇತಿ ಖಾಡ್ನದಿಗಳ ಪ್ರವಾಹದಬ್ಬರಕ್ಕೆ ನಾಶವಾಗಿದೆ. ಇದರೊಂದಿಗೆ ಇತರೆ ನಾಲ್ಕು ಸೇತುವೆಗಳೂ ನೀರುಪಾಲಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದವಾಡದ ಕಾಲು ಸೇತುವೆ ಕೂಡ ಬಿಯಾಸ್ ನದಿನೀರು ಸೇರಿದೆ. ಪಾಂಡೋ- ಶಿವಬ್ದಾರ್ ಸೇತುವೆ ಭಾನುವಾರ ಸಂಜೆ ಪ್ರವಾಹದಿಂದ ನಾಶವಾಗಿದೆ. ಕೂನ್‌ನ ಮಂಡಿ ಸದರ್ ಮತ್ತು ಜೋಗಿಂದರ್‌ನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೂಡಾ ಕುಸಿದುಬಿದ್ದಿದೆ.
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಹಲವೆಡೆ ಭೂಕುಸಿತವಾಗಿದೆ. ಸಾಕಷ್ಟು ಮನೆಗಳಿಗೂ ಹಾನಿಯಾಗಿದೆ. ಶಿಮ್ಲಾ ಜಿಲ್ಲೆಯ ಕೋಟ್‌ಗಢ ಪ್ರದೇಶದಲ್ಲಿ ಮನೆ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಕುಲು ಪಟ್ಟಣದ ಸಮೀಪ ಭೂಕುಸಿತದಿಂದ ಮಹಿಳೆ ಅಸನೀಗಿದ್ದಾರೆ. ಚಂಬಾದ ಕಟಿಯಾನ್ ತೆಹ್ಸಿಲ್‌ನಲ್ಲಿ ಶನಿವಾರ ರಾತ್ರಿ ಮನೆ ಕುಸಿದು ವ್ಯಕ್ತಿಯೊಬ್ಬರು ಜೀವಂತ ಸಮಾಧಿಯಾಗಿದ್ದಾರೆ.
ಕಳೆದ 36 ಗಂಟೆಗಳಲ್ಲಿ ರಾಜ್ಯದಲ್ಲಿ 13 ಕಡೆ ಭೂಕುಸಿತ ಮತ್ತು 9 ಮಹಾ ಪ್ರವಾಹಗಳು ವರದಿಯಾಗಿವೆ. ಭಾನುವಾರ ಬೆಳಗಿನ ಜಾವದವರೆಗೆ 736 ರಸ್ತೆಗಳ ಸಂಚಾರ ಸ್ಥಗಿತಗೊಂಡಿದ್ದು, 1,743 ಟ್ರಾನ್ಸ್‌ಫಾರ್ಮರ್‌ಗಳು ಹಾನಿಯಾಗಿವೆ. ಶಾಲಾ-ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ ಎಂದು ಮಂಡಿ ಜಿಲ್ಲಾಧಿಕಾರಿ ಅರಿಂದಮ್ ಚೌಧರಿ ತಿಳಿಸಿದರು.
ಪ್ರವಾಹದಲ್ಲಿ ಕೊಚ್ಚಿಹೋದ 21 ವಾಹನಗಳು:ವಶಕ್ಕೆ ಪಡೆದು ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಸುಮಾರು 21 ವಾಹನಗಳು ಬಿಯಾಸ್ ನದಿಯ ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಇದರಲ್ಲಿ 9 ಟ್ರಕ್‌ಗಳು, 10 ಎಲ್‌ಎಂವಿ ವಾಹನಗಳು, ಎರಡು ಬೈಕ್‌ಗಳು ಸೇರಿವೆ.
24 ಗಂಟೆಯಲ್ಲಿ 15 ಕೋಟಿ ರೂ ನಷ್ಟ: ಪ್ರಾಥಮಿಕ ವರದಿ ಪ್ರಕಾರ, ಕಳೆದ 24 ಗಂಟೆಯಲ್ಲಿ ಮಳೆಯಿಂದಾಗಿ ವಿದ್ಯುತ್ ಕೇಂದ್ರಗಳಿಗೆ 15 ಕೋಟಿ ರೂಗಳಷ್ಟ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಇದನ್ನೂ ಓದಿ:ದೇಶಾದ್ಯಂತ ಮುಂದುವರೆದ ಮಳೆಯ ಆರ್ಭಟ: ರಣಭೀಕರ ಮಳೆಗೆ ಉತ್ತರ ತತ್ತರ