ಚಿಕ್ಕಬಳ್ಳಾಪುರದಲ್ಲಿ ವರುಣನ ಅಬ್ಬರ.. ಧಾರಾಕಾರ ಮಳೆಗೆ ಇಡೀ ಗ್ರಾಮವೇ ಮುಳುಗುವ ಭೀತಿ! - ಗ್ರಾಮಕ್ಕೆ ತಡವಾಗಿ ಬಂದ ಅಧಿಕಾರಿ
ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಇಡೀ ಗ್ರಾಮವೇ ಮುಳುಗುವ ಭೀತಿಯಲ್ಲಿದ್ದು, ಗ್ರಾಮಸ್ಥರು ರಾತ್ರಿ ಹಿಡಿ ಜಾಗರಣೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೊತ್ತನೂರು ಗ್ರಾಮದಲ್ಲಿ ನಡೆದಿದೆ. ಅಧಿಕ ಮಳೆಯಾದ ಹಿನ್ನೆಲೆ ಕೊತ್ತುನೂರು ಗ್ರಾಮವೇ ಕೆರೆಯಂತಾಗಿದ್ದು, ಗ್ರಾಮದ ಬಹುತೇಕ ಎಲ್ಲ ಮನೆಗಳಿಗೂ ಮಳೆಯ ನೀರು ನುಗ್ಗಿ ಸಾಕಷ್ಟು ಅವಾಂತರಗಳೇ ಸೃಷ್ಟಿಯಾಗಿದೆ. ಇನ್ನು ಸರ್ಕಾರಿ ಶಾಲೆ, ರಸ್ತೆಗಳಲ್ಲಿ ಮನೆಗಳಲ್ಲಿ ಮೊಣಕಾಲುದ್ದ ನೀರು ನಿಂತಿದ್ದು, ರಾಗಿ, ಅಕ್ಕಿ, ಪೀಠೋಪಕರಣಗಳು ಮಳೆಯ ನೀರಿನಿಂದ ಸಂಪೂರ್ಣ ಹಾಳಾಗಿವೆ. ಮತ್ತೊಂದು ಕಡೆ ನೀರಿನಲ್ಲಿ ಹಾವು ಚೇಳುಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ದನಕರುಗಳು ಸೇರಿದಂತೆ ಗ್ರಾಮದ ಹಲವರಿಗೆ ಇದುವರೆಗೂ ಸಹ ತಿಂಡಿ ಊಟವೂ ದೊರೆತಿಲ್ಲ. ಗ್ರಾಮಕ್ಕೆ ತಡವಾಗಿ ಬಂದ ಅಧಿಕಾರಿಗಳ ನಡೆಗೆ ಗ್ರಾಮಸ್ಥರು ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಇಷ್ಟೆಲ್ಲದಕ್ಕೂ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಮಳೆ ನೀರು ಸರಾಗವಾಗಿ ಹೊಗಲು ಆಗದೇ ಗ್ರಾಮಕ್ಕೆ ನುಗ್ಗಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಗ್ರಾಮದಲ್ಲಿ 5 ಮನೆಗಳು ಕುಸಿದು ಬಿದ್ದಿದ್ದು, ಇನ್ನು ಹಲವು ಮನೆಗಳು ಕುಸಿಯುವ ಭೀತಿಯಲ್ಲಿವೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಗ್ರಾಮಸ್ಥರ ನೆರವಿಗೆ ಬರುತ್ತಾರೋ ಇಲ್ಲವೋ ಕಾದುನೋಡಬೇಕಾಗಿದೆ.
Last Updated : Feb 3, 2023, 8:27 PM IST