ಹುಬ್ಬಳ್ಳಿಯಲ್ಲಿ ಮಳೆ ಅಬ್ಬರ, ನೀರಿನಲ್ಲಿ ಕೊಚ್ಚಿಹೋದ ಬೈಕ್ಗಳು.. ಅವ್ಯವಸ್ಥೆಗೆ ಬೇಸತ್ತು ಯುವಕ ಹೀಗ್ ಮಾಡೋದಾ!
ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಂದು ಸುರಿದ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿದೆ. ಮೊದಲ ಮಳೆಯ ಅಬ್ಬರಕ್ಕೆ ವಾಣಿಜ್ಯ ನಗರಿ ತತ್ತರಿಸಿ ಹೋಗಿದೆ. ನಗರದ ದಾಜೀಬಾನಪೇಟೆ ತುಳಜಾಭವಾನಿ ದೇವಸ್ಥಾನ ರಸ್ತೆ ನದಿಯಂತೆ ಮಾರ್ಪಾಡಾಗಿತ್ತು. ಕೊಳಚೆ ನೀರು ರಸ್ತೆ ಮಧ್ಯೆ ಮೊಣಕಾಲುದ್ದ ಹರಿಯುವ ದೃಶ್ಯ ಕಂಡುಬಂತು. ಇನ್ನು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬೈಕ್ಗಳು ನೀರಿನ ರಭಸಕ್ಕೆ ತೇಲಿ ಹೋಗಿವೆ. ಇನ್ನು ಮೊದಲ ಮಳೆ ಆಗಮಿಸಿದ್ದರಿಂದ ಹಿರೇಮಠ ಎಂಬ ಯುವಕ ಹರಿಯುವ ಕೊಳಚೆ ನೀರಿಗೆ ಆರತಿ ಬೆಳಗಿ ತೆಂಗಿನಕಾಯಿ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ನಂತರ ಮಾತನಾಡಿದ ಯುವಕ, ಪ್ರತಿ ಬಾರಿ ಮಳೆಯಾದಾಗಲೂ ಈ ರಸ್ತೆ ನದಿಯಂತಾಗುತ್ತದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳು ಕೊಚ್ಚಿ ಹೋಗುತ್ತವೆ. ಕೊಳಚೆ ನೀರು ಪಕ್ಕದ ತುಳಜಾ ಭವಾನಿ ದೇವಾಲಯ ಪ್ರವೇಶಿಸುತ್ತದೆ. ಇದರ ಬಗ್ಗೆ ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಪಾಲಿಕೆಯ ಗಮಕ್ಕೆ ತರಲಾಗುತ್ತದೆ. ಆದರೆ ಯಾರೂ ಸಹ ಈ ಅವ್ಯವಸ್ಥೆಯನ್ನು ಸರಿಪಡಿಸುತ್ತಿಲ್ಲ. ಇದಕ್ಕೆ ಸೂಕ್ತ ಪರಿಹಾರದ ವ್ಯವಸ್ಥೆ ಮಾಡುವಂತೆ ಯುವಕ ಒತ್ತಾಯಿಸಿದ್ದಾನೆ.
ಇದನ್ನೂ ಓದಿ:ಬೆಂಗಳೂರಲ್ಲಿ ವರುಣನ ಆರ್ಭಟಕ್ಕೆ ಮನೆ ಕುಸಿತ, ಕಾರ್ಗಳು ಜಖಂ..