ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಿಷ್ಯವೇತನ, ವಸತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ - ಮದುವೆ ಸಹಾಯಧನ
Published : Dec 6, 2023, 7:38 PM IST
ಬೆಳಗಾವಿ:ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಧಿವೇಶನದ ಮೂರನೇ ದಿನ ಬೆಳಗಾವಿ ಸುವರ್ಣ ಗಾರ್ಡನ್ ಬಳಿಯ ಟೆಂಟ್ ನಲ್ಲಿ ಹಾವೇರಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಗಳ ಜಂಟಿ ಸಮಿತಿ ಪದಾಧಿಕಾರಿಗಳು ಧರಣಿ ನಡೆಸಿದರು.
ಕಾರ್ಮಿಕ ಸಚಿವರ ಆದೇಶದ ಮೇರೆಗೆ ಹಾವೇರಿ ಜಿಲ್ಲೆಯಲ್ಲಿ ನಕಲಿ ಕಾರ್ಡ್ ತನಿಖೆ ಮಾಡಲು ತನಿಖಾ ತಂಡ ರಚಿಸಿ ಆದೇಶ ಹೊರಡಿಸಿದ್ದು ಖಂಡನೀಯ. ತಕ್ಷಣ ಈ ಅದೇಶ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಮಿಕರ ಸಂಘಗಳ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸದೇ ಆದೇಶ ಹೊರಡಿಸಿದ್ದನ್ನು ವಾಪಸ್ ಪಡೆಯಬೇಕು. ಬೇರೆ ಇಲಾಖೆ ಅಧಿಕಾರಿಗಳಿಂದ ತನಿಖೆ ಮಾಡಿಸಬೇಕು. ಅಲ್ಲದೇ ಸೇವಾ ಸಿಂಧು ತಂತ್ರಾಂಶ ಪ್ರಾರಂಭವಾದಾಗಿನಿಂದ ಕಟ್ಟಡ ಕಾರ್ಮಿಕರು ಸಹಾಯಧನದ ಅರ್ಜಿಗಳನ್ನು ಸಲ್ಲಿಸಿ ಎಷ್ಟು ಜನ ಹಣ ಪಡೆದಿದ್ದಾರೆ? ಅನರ್ಹ ಫಲಾನುಭವಿಗಳು ಎಷ್ಟು ಹಣ ಪಡೆದಿದ್ದಾರೆ ಎನ್ನುವುದನ್ನೂ ಸೇರಿಸಿ ತನಿಖೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ವೇಳೆ ಈಟಿವಿ ಭಾರತ ಜೊತೆ ಸಂಘದ ಜಿಲ್ಲಾ ಉಪಾಧ್ಯಕ್ಷ ನಿಂಗಪ್ಪ ಕಮ್ಮಾರ ಮಾತನಾಡಿ, ಫಲಾನುಭವಿಗಳಿಗೆ ಧನಸಹಾಯ, ಮಕ್ಕಳಿಗೆ ಶಿಷ್ಯವೇತನ, ಹೆರಿಗೆ ಭತ್ಯೆ, ಮದುವೆ ಸಹಾಯಧನವನ್ನು ಈ ಸರ್ಕಾರ ಕಡಿತಗೊಳಿಸಿದೆ. ಇನ್ನು ಹಾವೇರಿ ಜಿಲ್ಲೆಯನ್ನು ಕಾರ್ಮಿಕ ಸಚಿವರು ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ನಮ್ಮ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಅಜಯಕುಮಾರ ಹಡಪದ, ಉಪಾಧ್ಯಕ್ಷ ಡಿ ಎಸ್ ಓಲೇಕಾರ, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ನಾಗರುಳ್ಳಿ ಸೇರಿ ಮತ್ತಿತರರು ಇದ್ದರು.
ಇದನ್ನೂಓದಿ:ರೈತರ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಿಸಾನ್ ಸಂಘಟನೆ ಪ್ರತಿಭಟನೆ