ರೈತರ ಮಕ್ಕಳಿಗೆ ಇ.ಡಿ ನೋಟಿಸ್ ಕೊಟ್ಟಿದೆಯೇ?: ಡಿಕೆಶಿ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ - ರೈತ
ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಬುಧವಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ದ ಟೀಕಾಪ್ರಹಾರ ನಡೆಸಿದರು. "ಅವರು ರೈತನ ಮಗನಾ?, ರೈತರ ಮಕ್ಕಳಿಗೆ ಇ.ಡಿ ನೋಟಿಸ್ ಕೊಟ್ಟಿರುವುದನ್ನು ಎಲ್ಲಾದರೂ ನೋಡಿದ್ದೀರಾ?" ಎಂದರು.
"ಜೆಡಿಎಸ್ ಬಗ್ಗೆ ಕೇವಲವಾಗಿ ಮಾತನಾಡಿದರೆ ನಿಮ್ಮ ಪಕ್ಷ ಕಳೆದ ಬಾರಿ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಗೆದ್ದಿರುವ 79 ಸೀಟುಗಳ ಪೈಕಿ 29ಕ್ಕೆ ಬಂದು ನಿಲ್ಲುತ್ತದೆ. ಅವರಿಗೆ ಇನ್ನೂ ದುಡ್ಡು ಹೊಡೆಯಲು ಬಿಡಬೇಕಿತ್ತಂತಾ?. ನನ್ನನ್ನು ಯಾವ ರೀತಿ ನಡೆಸಿಕೊಂಡರು ಎಂಬುದು ಗೊತ್ತಿದೆ. ನೀರಾವರಿ ಸಚಿವನಾಗಿ ಏನೇನು ನಡೆಸಿದ್ದಿಯಾ ಅಂತ ನನಗೆ ಚೆನ್ನಾಗಿ ಗೊತ್ತಿದೆ" ಎಂದು ಕೆಂಡಾಮಂಡಲವಾದರು.
"ಸಮ್ಮಿಶ್ರ ಸರ್ಕಾರ ನಡೆಸಲು ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿದ್ವಾ?, ಹುಡುಕಿಕೊಂಡು ಬಂದವರು ನೀವು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಿಕೊಳ್ಳಿ ಅಂತ ನಾವು ಹೇಳಿಲ್ವಾ?. ದೇವೇಗೌಡರ ಸಮ್ಮುಖದಲ್ಲಿ ಮಾತನಾಡಿದನ್ನು ಹೇಳಲು ಜೀವಂತವಾಗಿ ಯಾರು ಬದುಕಿಲ್ವಾ? ಜೆಡಿಎಸ್ ಬಗ್ಗೆ ಮಾತನಾಡಲು ನಿಮಗೆ ಯಾವರ ರೀತಿ ನೈತಿಕತೆ ಇದೆ. ನಮ್ಮ ಅಧಿಕಾರಾವಧಿಯಲ್ಲಿ 25 ಸಾವಿರ ಕೋಟಿ ರೂ ರೈತರ ಸಾಲ ಮನ್ನಾ ಮಾಡಿದ್ದೇವೆ" ಎಂದು ಹೇಳಿದರು.
ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ದಿನದಿಂದ ದಿನಕ್ಕೆ ವಿಧಾನಸಭಾ ಕ್ಷೇತ್ರ ಚುನಾವಣೆ ಹೊಸ ಹೊಸ ಆಯಾಮಗಳನ್ನು ಕಂಡುಕೊಳ್ಳುತ್ತಿದೆ. ಫೆ.28ರಂದು ಪ್ರಜಾಧ್ವನಿ ಯಾತ್ರಾ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ಒಳಜಗಳ ಶುರುವಾಗಿರುವುದರ ಬಗ್ಗೆ ಮಾತನಾಡಿದ್ದರು. ಒಂದೆಡೆ ಹೆಚ್‌ಡಿಕೆ ಸ್ವರೂಪ್ಗೆ ಟಿಕೆಟ್ ಕೊಡಲು ಪಣತೊಟ್ಟರೆ, ಮತ್ತೊಂದೆಡೆ ಭವಾನಿ ರೇವಣ್ಣರಿಗೆ ಟಿಕೆಟ್ ನೀಡಬೇಕೆಂದು ರೇವಣ್ಣ ಜಿದ್ದಿಗೆ ಬಿದ್ದಿದ್ದಾರೆ. ಈ ಮಧ್ಯೆ ಡಿಕೆಶಿ ಆಪರೇಷನ್ ಹಸ್ತಕ್ಕೆ ಕೈ ಹಾಕಿರುವುದು ಜೆಡಿಎಸ್‌ಗೆ ಎಲ್ಲಿಲ್ಲದ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ದನ್ನೂ ಓದಿ:ಚಿಕ್ಕಮಗಳೂರು: ಸಿದ್ದರಾಮಯ್ಯ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ