ಕಾವೇರಿ ಕಿಚ್ಚು: ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರಿಂದ ಅರೆಬೆತ್ತಲೆ ಪ್ರತಿಭಟನೆ - ಈಟಿವಿ ಭಾರತ್ ಕನ್ನಡ ನ್ಯೂಸ್
Published : Sep 26, 2023, 11:00 PM IST
ಬೆಳಗಾವಿ : ಕಾವೇರಿ ನದಿ ನೀರು ತಮಿಳುನಾಡಿಗೆ ಬಿಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ನೇತೃತ್ವದಲ್ಲಿ ನಗರದ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಖಾಲಿ ಕೊಡಗಳನ್ನು ತಲೆ ಮೇಲೆ ಹೊತ್ತುಕೊಂಡು, ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು.
ಇಡೀ ರಾಜ್ಯದಾದ್ಯಂತ ಕಾವೇರಿ ಕಿಚ್ಚು ಜೋರಾಗಿದ್ದು, ಬೆಂಗಳೂರು ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿಯೂ ಕರವೇ ಕಾರ್ಯಕರ್ತರು ಧರಣಿ ನಡೆಸಿ ರಸ್ತೆಯಲ್ಲಿ ಉರುಳು ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪ್ರತಿಕೃತಿ ದಹಿಸಿ, ಕಾವೇರಿ ನಮ್ಮದು, ಮಹದಾಯಿ ನಮ್ಮದು ಎಂದು ಘೋಷಣೆ ಕೂಗಿದರು.
ಮಳೆ ಇಲ್ಲದೇ ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ. ಕುಡಿಯಲು ನೀರಿಲ್ಲದೇ ಜನ-ಜಾನುವಾರುಗಳು ಪರದಾಡುವ ಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ಕಾವೇರಿ ನದಿಯಿಂದ ಪ್ರತಿ ದಿನ 5 ಸಾವಿರ ಕ್ಯೂಸೆಕ್ ಬಿಡುಗಡೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ರಾಜ್ಯ ಸರ್ಕಾರಕ್ಕೆ ಹೋರಾಟಗಾರರು ಪ್ರಶ್ನಿಸಿದರು. ಸರ್ಕಾರ ತಮಿಳುನಾಡಿಗೆ ನೀರು ಬಿಡುವುದನ್ನು ತಕ್ಚಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ಇಡೀ ರಾಜ್ಯವೇ ಹೊತ್ತಿ ಉರಿಯುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಕರವೇ ಕಾರ್ಯಕರ್ತರಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಕೂಡ ಸಾಥ್ ಕೊಟ್ಟರು.
ಇದನ್ನೂ ಓದಿ :ತಮಿಳುನಾಡಿಗೆ ಕಾವೇರಿ ನೀರು ಬಿಡಬೇಡಿ ಎಂದು ಶಿವಮೊಗ್ಗದಲ್ಲಿ ತಮಿಳು ಸೇವಾ ಸಂಘದಿಂದಲೇ ಪ್ರತಿಭಟನೆ