ಗ್ರೀನ್ ಇಂಡಿಯಾ ಅಭಿಯಾನ: ಪರಿಸರ ಜಾಗೃತಿಗಾಗಿ 26 ಸಾವಿರ ಕಿಲೋ ಮೀಟರ್ ಸೈಕಲ್‌ಜಾಥಾ - ETV Bharath Kannada news
Published : Dec 23, 2023, 9:00 PM IST
ವಿಜಯಪುರ:ಉತ್ತರಪ್ರದೇಶದ ರಾಬಿನ್ ಸಿಂಗ್ ಎಂಬ ವ್ಯಕ್ತಿ ಗ್ರೀನ್ ಇಂಡಿಯಾ ಎಂದ ಅಭಿಯಾನವನ್ನು ಆರಂಭಿಸಿ 443 ದಿನಗಳ ಕಾಲ 22 ರಾಜ್ಯದಲ್ಲಿ 26 ಸಾವಿರ ಕಿಲೋ ಮೀಟರ್ಗಿಂತಲೂ ಹೆಚ್ಚು ದೂರ ಕ್ರಮಿಸಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ರಾಬಿನ್ ಸಿಂಗ್ ಶನಿವಾರ ಸೈಕಲ್ ಜಾಥಾದ ಮೂಲಕ ವಿಜಯಪುರ ಜಿಲ್ಲೆಯ ತಾಳಿಕೋಟೆಗೆ ಆಗಮಿಸಿದರು. ಇಲ್ಲಿನ ಹಸಿರು ಸಂಪದ ಬಳಗ ಮತ್ತು ವಿವಿಧ ಸಂಘ ಸಂಸ್ಥೆಗಳು ಆತ್ಮೀಯವಾಗಿ ರಾಬಿನ್ ಅವರನ್ನು ಬರಮಾಡಿಕೊಂಡರು.
ರಾಬಿನ್ ಸಿಂಗ್ 2022 ಅಕ್ಟೋಬರ್‌ನಿಂದ ಪ್ರಾರಂಭಿಸಿ ಸತತ 443 ದಿನಗಳ ಕಾಲ ಸೈಕಲ್‌ಜಾಥಾದ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ದೇಶದ 22 ರಾಜ್ಯಗಳಲ್ಲಿ ಸೈಕಲ್ ಮೇಲೆಯೇ ಸಂಚರಿಸುತ್ತಾ ಪರಿಸರದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಸಂಚಾರದ ವೇಳೆ ಪರಿಸರ ಸ್ನೇಹಿ ಬಳಗ, ಸಂಘ ಸಂಸ್ಥೆ, ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಹೋಗಿ ಅಭಿಯಾನದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಅರಣ್ಯಭೂಮಿ ಕಡಿಮೆ, ಶಾಶ್ವತ ಬರಪೀಡಿತ ಜಿಲ್ಲೆ ಹೀಗೆ ನಾನಾ ರೀತಿಯ ಕಳಂಕ ಹೊತ್ತ ಬಸವನಾಡಿನಲ್ಲಿ ಪರಿಸರಕ್ಕೆ ಪೂರಕವಾಗಿ ಒಂದಿಷ್ಟು ಅರ್ಥಪೂರ್ಣ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿರುವುದು ಸಂತಸಕರ ಸಂಗತಿ. ಕೋಟಿ ವೃಕ್ಷ, ಮಣ್ಣು ಉಳಿಸಿ, ವೃಕ್ಷೋತ್ಥಾನ ಪಾರಂಪರಿಕ ಓಟ ಹೀಗೆ ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳು ವಿವಿಧ ಜಾಗೃತಿ ಕಾರ್ಯಪ್ರವೃತ್ತರಾಗಿವೆ. ಶನಿವಾರ ರೈತ ದಿನಾಚರಣೆಯ ಸಂದರ್ಭದಲ್ಲೇ ಉತ್ತರ ಪ್ರದೇಶದ ರಾಬಿನ್ ಸಿಂಗ್ ವಿಜಯಪುರಕ್ಕೆ ಆಗಮಿಸಿ ಇಲ್ಲಿನ ವಿವಿಧ ಸಂಘಟನೆಗಳ ಜೊತೆ ಪಾಲ್ಗೊಂಡು ಪರಿಸರ ಜಾಗೃತಿ ವಿಚಾರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಕೊಪ್ಪಳದಲ್ಲಿ ಬೆಳೆ ಹಾನಿ: ನಷ್ಟ ಪರಿಹಾರ ನೀಡುವಂತೆ ರೈತರ ಒತ್ತಾಯ