ಚಡಚಣ ಠಾಣೆಗೆ 3ನೇ ಬಾರಿಗೆ ವರ್ಗವಾಗಿ ಬಂದ PSIಗೆ ಕುಂಬಳಕಾಯಿ ಒಡೆದು, ಆರತಿ ಬೆಳಗಿ ಅದ್ಧೂರಿ ಸ್ವಾಗತ!
ವಿಜಯಪುರ: ಭೀಮಾತೀರದ ಹಂತಕರ ಸ್ಥಳದಲ್ಲಿ ಮತ್ತೊಮ್ಮೆ ಪಿಎಸ್ಐ ಆಗಿ ಚಡಚಣ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದ ಮಹಾದೇವ ಯಲಿಗಾರ ಅವರಿಗೆ ಇಲ್ಲಿನ ಜನರು ತಿಲಕ ಹಚ್ಚಿ ಕುಂಬಳಕಾಯಿ ಒಡೆದು ಆರತಿ ಬೆಳಗಿ ಅದ್ದೂರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರೊಬ್ಬರು ಮಾತನಾಡಿ, ವಿಜಯಪುರ ಜಿಲ್ಲೆ ಹಾಗೂ ಮಹಾರಾಷ್ಟ್ರದಲ್ಲಿಯೂ ಸಂಚಲನ ಮೂಡಿಸಿದ್ದ ಪಿಎಸ್ಐ ಮಹಾದೇವ ಯಲಿಗಾರ ಅವರು 3ನೇ ಬಾರಿಗೆ ಚಡಚಣ ಠಾಣೆಗೆ ಆಗಮಿಸಿದ್ದು, ನಮಗೆಲ್ಲ ಸಂತೋಷವಾಗಿದೆ. ಈ ಭಾಗದ ಶಾಂತಿ- ಸುವ್ಯವಸ್ಥೆಗಾಗಿ ಹಗಲಿರುಳು ಶ್ರಮಿಸಿದ್ದ ಅವರ ಹೆಸರಲ್ಲಿ ಪಬ್ಲಿಕ್ ಹಿರೋ ಎಂಬ ಪುಸ್ತಕ ರಚನೆಗೊಂಡು ಹೆಚ್ಚು ಪ್ರಚಾರ ಪಡೆಯಿತು. ಮಹಾದೇವ ಯಲಿಗಾರ ಕುರಿತು ಚಲನಚಿತ್ರವೂ ಬರಲಿದೆ. ಕರುನಾಡಿನ ಸಿಂಗಂ ಎಂದು ಅವರನ್ನು ಕರೆಯಲು ನಮಗೆ ಹೆಮ್ಮೆ ಇದೆ ಎಂದು ತಿಳಿಸಿದರು.
ಪಿಎಸ್‌ಐ ಮಹಾದೇವ ಯಲಗಾರ ಮಾತನಾಡಿ, ಇಪ್ಪತ್ತು ವರ್ಷದಿಂದ ಪಿಎಸೈ ಆಗಿ ಸೇವೆ ಸಲ್ಲಿಸುತ್ತಿರುವುದು ನನ್ನ ಸಾಧನೆ. ರಾಜ್ಯದೊಳಗೆ ಒಂದೇ ಪೊಲೀಸ್ ಠಾಣೆಗೆ ಮೂರು ಸಲ ಯಾವ ಪಿಎಸ್ಐ ಕೂಡಾ ವರ್ಗಾವಣೆಯಾಗಿ ಬಂದಿಲ್ಲ. ಪ್ರಮೋಷನ್ ಎಲ್ಲ ಕಾಮನ್, ರಾಜ್ಯದಲ್ಲಿ ಇಪ್ಪತ್ತು ವರ್ಷಗಳಿಂದ ಪಿಎಸೈ ಆಗಿ ಕೆಲಸ ಮಾಡುತ್ತಿದ್ದೇನೆ. ಹಿಂದೆ ಹಾಗೂ ಮುಂದೆಯೂ ಯಾರೂ ಈ ಸಾಧನೆ ಮಾಡಿಲ್ಲ ಎಂದರು. ಇದೇ ವೇಳೆ ಭೀಮಾತೀರದ ಮುತ್ತುರತ್ನಗಳು ಎಂಬ ಕೃತಿ ರಚನೆ ಮಾಡುವುದಾಗಿ ತಿಳಿಸಿದರು. ಪಿಎಸ್‌ಐ ಮಹಾದೇವ ಯಲಿಗಾರ ಅವರನ್ನು ಸ್ವಾಗತಿಸಿದ ರೀತಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.