ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಸಂಭ್ರಮದ ತೆಪ್ಪೋತ್ಸವ.. ಬಾಣ ಬಿರುಸುಗಳ ಚಿತ್ತಾರದ ಮೆರುಗು - ಪಾರ್ವತಿ ದೇವಿಯ ತೆಪ್ಪೋತ್ಸವ
ಮೈಸೂರು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ದೊಡ್ಡ ಜಾತ್ರೆಯ ಕೊನೆಯ ಕಾರ್ಯಕ್ರಮ ತೆಪ್ಪೋತ್ಸವ ಸಡಗರದಿಂದ ಕಪಿಲಾ ನದಿಯಲ್ಲಿ ಮಂಗಳವಾರ ರಾತ್ರಿ ಭಕ್ತ ಸಾಗರದ ನಡುವೆ, ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಜರುಗಿತು.
ಮಂಗಳವಾರ ರಾತ್ರಿ ಶ್ರೀ ಕಂಠೆಶ್ವರ ಹಾಗೂ ಪಾರ್ವತಿ ದೇವಿಯನ್ನು ದೇವಾಲಯದಿಂದ ಪೂಜೆ ಮಾಡಿ ತಂದು, ಕಪಿಲಾ ನದಿ ತೀರದಲ್ಲಿ ಇರುವ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಕಪಿಲಾ ನದಿಯಲ್ಲಿ ಪೂರ್ವದಿಂದ ಪಶ್ಚಿಮಾಭಿಮುಖವಾಗಿ ಮೂರು ಸುತ್ತು ವಿಶೇಷ ಅಲಂಕಾರದಿಂದ ಮಾಡಿರುವ ದೋಣಿಯಲ್ಲಿ ಉತ್ಸವ ಮೂರ್ತಿಗಳನ್ನು ಇಟ್ಟು, ತೆಪ್ಪೋತ್ಸವ ನೆರವೇರಿಸಲಾಯಿತು. ಪಟಾಕಿ, ಬಾಣ ಬಿರುಸುಗಳು ತೆಪ್ಪೋತ್ಸವಕ್ಕೆ ಇನ್ನಷ್ಟು ಮೆರುಗು ತಂದವು.
ತೆಪ್ಪೋತ್ಸವದ ಬಳಿಕ ಉತ್ಸವ ಮೂರ್ತಿಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯ ಮಧ್ಯೆ ಅನ್ನದಾನಿಗಳಿಂದ ಭಕ್ತರಿಗೆ ಪ್ರಸಾದ ನೀಡಲಾಯಿತು. ಇದೇ ವೇಳೆ ದೇವಾಲಯದ ಪ್ರಧಾನ ಅರ್ಚಕ ನೀಲಕಂಠ ದೀಕ್ಷಿತ್ ಅವರು ಶ್ರೀ ಕಂಠೇಶ್ವರ ಹಾಗೂ ಪಾರ್ವತಿ ದೇವಿಯ ತೆಪ್ಪೋತ್ಸವದ ಬಗ್ಗೆ ವಿವರಿಸಿದರು. ಪ್ರತಿ ವರ್ಷವೂ ದೊಡ್ಡ ಜಾತ್ರೆ, ಚಿಕ್ಕ ಜಾತ್ರೆ ಆದ ನಂತರ ಐದು ದಿನ ತೆಪ್ಪೋತ್ಸವ ನಡೆಯುತ್ತದೆ. ಮುಂದೆ ಬರುವುದು ಕಲ್ಯಾಣೋತ್ಸವ (ಜೂನ್-ಜುಲೈ). ನಾಡಿದ್ದು ಮಹಾ ಸಂಪ್ರೊಕ್ಷಣೆ, ನಂದಿವಾಹನ ಉತ್ಸವ ನಡೆಯುತ್ತದೆ. ಅಂದು ದೇವರಿಗೆ ವಿಶೇಷವಾದ ಅಭಿಷೇಕಗಳು ನಡೆಯುತ್ತವೆ. ಶಯನೋತ್ಸವ ಕೂಡ ಜರುಗುತ್ತದೆ. ಇವುಗಳೆಲ್ಲವೂ ಮುಗಿದ ನಂತರ ದೊಡ್ಡ ಜಾತ್ರೆ ಸಂಪನ್ನವಾಗುತ್ತದೆ ಎಂದು ನೀಲಕಂಠ ದೀಕ್ಷಿತ್ ಅವರು ಹೇಳಿದರು.
ಇದನ್ನೂ ನೋಡಿ:ಗಬ್ಬೂರು ಶ್ರೀಬೂದಿ ಬಸವೇಶ್ವರ ಜಾತ್ರೋತ್ಸವ: ದಾಂಪತ್ಯಕ್ಕೆ ಕಾಲಿಟ್ಟ 175 ಜೋಡಿ