ಮಂಗಳೂರು: ಹುಲಿವೇಷಧಾರಿಗೆ ದೈವ ಆವಾಹನೆಯಾಗಿರುವ ವಿಡಿಯೋ ವೈರಲ್ - ಹುಲಿವೇಷ
Published : Oct 24, 2023, 10:00 PM IST
|Updated : Oct 24, 2023, 10:12 PM IST
ಮಂಗಳೂರು: ದೇವರಾಧನೆಯ ವೇಳೆ ಹುಲಿವೇಷಧಾರಿಯೊಬ್ಬರಿಗೆ ದೈವ ಆವಾಹನೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರಿನ ಬೊಕ್ಕಪಟ್ನ ಶಿವ ಫ್ರೆಂಡ್ಸ್ನ ಹುಲಿವೇಷದ ಊದು ಹಾಕುವ ಕಾರ್ಯಕ್ರಮದಲ್ಲಿ ಹುಲಿವೇಷಧಾರಿಗೆ ದೈವ ಆವಾಹನೆಯಾಗಿರುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ.
ಹಿರಿಯರ ಸಾಂತ್ವನದ ಬಳಿಕ ಹುಲಿವೇಷಧಾರಿ ಸಹಜ ಸ್ಥಿತಿಗೆ ಬಂದಿದ್ದಾರೆ. ವೈರಲ್ ವಿಡಿಯೋದಲ್ಲಿ ನಟ ರಾಜ್ ಬಿ.ಶೆಟ್ಟಿ ಸಹ ಕಾಣಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆಯುವ ಹುಲಿವೇಷಕ್ಕೆ ಧಾರ್ಮಿಕ ನಂಬುಗೆ ಇದೆ. ಶುದ್ಧಾಚಾರಗಳನ್ನು ಪಾಲಿಸಿ ಹುಲಿವೇಷಗಳನ್ನು ಹಾಕಲಾಗುತ್ತಿದ್ದು, ಒಮ್ಮೆ ಹುಲಿವೇಷ ಹಾಕಿದ ಬಳಿಕ ಅದನ್ನು ಧಾರ್ಮಿಕ ವಿಧಾನಗಳೊಂದಿಗೆ ತೆಗೆಯುವವರೆಗೂ ಮನೆಗೆ ಹೋಗುವಂತಿಲ್ಲ. ಅದನ್ನು ಮಂಗಳೂರಿನ ಹುಲಿವೇಷಧಾರಿಗಳು ಈಗಲೂ ಪಾಲಿಸಿಕೊಂಡು ಬರುತ್ತಿದ್ದಾರೆ.
ಮತ್ತೊಂದೆಡೆ, ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಮುಳಿಹಿತ್ಲುವಿನ ಎಂಎಫ್ಸಿ ತಂಡದ ಹುಲಿವೇಷಧಾರಿ ಶಂಕರ್ ಎಂಬ ಯುವಕ ರಿವರ್ಸ್ ಪಲ್ಟಿ ಹೊಡೆಯುವಾಗ ಆಯತಪ್ಪಿ ಬಿದ್ದು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಆಯತಪ್ಪಿ ಬಿದ್ದಾಗ ತಲೆ ನೆಲಕ್ಕೆ ಬಡಿದಿದ್ದು, ಪರಿಣಾಮ ಶಂಕರ್ ಕತ್ತು ಉಳುಕಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ:ಹುಲಿವೇಷ ಕುಣಿತ ಸ್ಪರ್ಧೆಗೆ ತಾರಾ ಮೆರುಗು: ಕ್ರಿಕೆಟಿಗ ಹರ್ಭಜನ್ ಸಿಂಗ್, ನಟ ಸುನೀಲ್ ಶೆಟ್ಟಿ ಭಾಗಿ