ಕೊಪ್ಪಳದಲ್ಲಿ ಮಸೀದಿ ಉದ್ಘಾಟಿಸಿದ ಗವಿಸಿದ್ದೇಶ್ವರ ಸ್ವಾಮೀಜಿ - ಭಾನಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಮಸೀದಿ
ಕೊಪ್ಪಳ : ಧರ್ಮಕ್ಕಾಗಿ ರಸ್ತೆಯಲ್ಲಿ ರಕ್ತ ಹರಿಸುವುದು ಧರ್ಮವಲ್ಲ. ಅನಾರೋಗ್ಯದಿಂದ ರಸ್ತೆಯಲ್ಲಿ ಒದ್ದಾಡುವವನಿಗೆ ರಕ್ತ ನೀಡುವುದು ನಿಜವಾದ ಧರ್ಮ ಎಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಮಸೀದಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಭಾನಾಪುರ ಗ್ರಾಮದಲ್ಲಿ ಕೇವಲ ಐದು ಮುಸಲ್ಮಾನರ ಮನೆಗಳಿವೆ. ಊರವರೆಲ್ಲ ಸೇರಿ ಮಸೀದಿ ಕಟ್ಟಿಸಿದ್ದೀರಲ್ಲ ಇದೇ ನಿಜವಾದ ಧರ್ಮ ಎಂದು ಅಭಿಪ್ರಾಯಪಟ್ಟರು.
ಈ ಪ್ರಕೃತಿಯಲ್ಲಿ ದಿನನಿತ್ಯ ಬೆಳಗುವ ಸೂರ್ಯ, ಬೀಸುವ ಗಾಳಿ, ಹರಿವ ನೀರು ಇವು ಯಾವುವು ಒಂದೇ ಧರ್ಮದವರು ನನ್ನನ್ನು ಉಪಯೋಗಿಸಿ ಎಂದು ಹೇಳಿಲ್ಲ. ಮಾವಿನ ಗಿಡ, ತೆಂಗಿನ ಮರ ಇಂತವರೇ ನಾ ಬಿಡುವ ಹಣ್ಣನ್ನು ತಿನ್ನಬೇಕು ಎಂದು ಹೇಳಿಲ್ಲ. ಹೀಗಿರುವಾಗ ಪ್ರಕೃತಿಗೆ ಇಲ್ಲದ ಭೇದ ಭಾವ ಮನುಷ್ಯನಿಗೆ ಯಾಕೆ?. ನಾವೆಲ್ಲರೂ ಒಂದಾಗಿ ಸೌಹಾರ್ದಯುತವಾಗಿ ಬಾಳುವುದೇ ಧರ್ಮ ಎಂದು ಹೇಳಿದರು.
ಇನ್ನೊಬ್ಬರ ಮನಸ್ಸಿಗೆ ನೋವು ಮಾಡದೇ ಇರೋದೇ ಧರ್ಮ. ಎಲ್ಲರೂ ಭಾವೈಕ್ಯದಿಂದ ಬದುಕು ಸಾಗಿಸುವುದು ಮುಖ್ಯ. ಜಾತಿ, ಮತ, ಪಂಥ ನೋಡಿ ಬದುಕುವುದಲ್ಲ. ಧರ್ಮ ಎಂದರೆ ಎಲ್ಲರನ್ನು ನೋಡಿ, ಸಂತೋಷ ಪಡಬೇಕು. ಇಂತಹ ಪುಟ್ಟಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಐದು ಮನೆಗಳಿದ್ದರೂ ಎಲ್ಲರೂ ಸಮನ್ವಯದಿಂದ ಬದುಕುತ್ತಿರುವುದು ಧರ್ಮ ಸಮನ್ವಯದ ಸಂಕೇತ ಎಂದು ಹೇಳಿದರು.
ಇದನ್ನೂ ಓದಿ :ವಿಡಿಯೋ: ಅಮೃತ್ಸರದ ಸಚ್‌ಖಂದ್ ಶ್ರೀ ಹರ್ಮಂದಿರ್ ಸಾಹಿಬ್‌ಗೆ ರಾಘವ್ ಪರಿಣಿತಿ ಭೇಟಿ