ವಿಜಯಪುರ: ವಿಜೃಂಭಣೆಯಿಂದ ನಡೆದ ಗೌರೀಶ್ವರ ಜಾತ್ರೆ - ದ್ಯಾಮವ್ವನ ಸೋಗು
Published : Jan 2, 2024, 7:55 AM IST
ವಿಜಯಪುರ:ಜಿಲ್ಲೆಯ ನೂತನ ತಾಲೂಕು ಕೇಂದ್ರ ನಿಡಗುಂದಿ ಪಟ್ಟಣದ ಗೌರೀಶ್ವರ ಜಾತ್ರೆಯ ನಿಮಿತ್ತ ಸೋಮವಾರ ಬೆಳಿಗ್ಗೆ ದ್ಯಾಮವ್ವನ ಸೋಗು, ಸಂಜೆ ಗೌರೀಶ್ವರ ಮೂರ್ತಿಗಳ ಮೆರವಣಿಗೆ ಜರುಗಿತು. ವಿಶೇಷ ಅಭಿಷೇಕ, ಅಲಂಕಾರ, ಪೂಜೆ ಸಲ್ಲಿಸಲಾಯಿತು. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಮಹಿಳೆಯರು ನೈವೇದ್ಯ, ಕಾಯಿ, ಕರ್ಪೂರ ಅರ್ಪಿಸಿ ಭಕ್ತಿ ಮೆರೆದರು. ಸಾಕಷ್ಟು ಮಂದಿ ತಮ್ಮ ಕುಟುಂಬದೊಂದಿಗೆ ಬಂದಿದ್ದು ಕಂಡುಬಂತು. ದೇವರಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥಗಳನ್ನು ಪೂರೈಸುವಂತೆ ಪ್ರಾರ್ಥಿಸಿದರು. ಪಟ್ಟಣ ವ್ಯಾಪ್ತಿಯನ್ನು ಒಳಗೊಂಡ ಬಸವನ ಬಾಗೇವಾಡಿ ಮತಕ್ಷೇತ್ರದ ಶಾಸಕರೂ ಆಗಿರುವ ಸಚಿವ ಶಿವಾನಂದ ಪಾಟೀಲ್ ಕೂಡಾ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದ್ಯಾಮವ್ವನ ಸೋಗಿನ ಮೆರವಣಿಗೆ ಸಂಭ್ರಮದಿಂದ ಜರುಗಿತು.
ಮೆರವಣಿಗೆಯಲ್ಲಿ ಡೊಳ್ಳು, ನಾನಾ ವಾದ್ಯಗಳು ಮೊಳಗಿದರೆ ಪೋತರಾಜ ಸೇರಿ ನಾನಾ ಸೋಗುದಾರಿಗಳು ಗಮನ ಸೆಳೆದರು. ಸಂಜೆಯಾಗುತ್ತಿದ್ದಂತೆ ಅಲಂಕೃತ ವಾಹನದಲ್ಲಿ ಗೌರಿ, ಶಿವ, ಗಂಗೆ ಹಾಗೂ ನಂದಿ ಮೂರ್ತಿಗಳ ಮೆರವಣಿಗೆ ಜರುಗಿತು.