ನದಿ ಮಧ್ಯೆ ಸಿಲುಕಿದ ವಿಶ್ವದ ಅತಿದೊಡ್ಡ ವಿಹಾರ ನೌಕೆ ಗಂಗಾ ವಿಲಾಸ್: ವಿಡಿಯೋ
ಛಾಪ್ರಾ:ಭಾರತದಲ್ಲಿ ತಯಾರಾದ, ವಿಶ್ವದ ಅತಿದೊಡ್ಡ ವಿಹಾರ ನೌಕೆಯಾದ ಎಂವಿ ಗಂಗಾ ವಿಲಾಸ್ ಬಿಹಾರದ ಛಾಪ್ರಾದಲ್ಲಿ ನದಿ ಮಧ್ಯೆಯೇ ಸಿಲುಕಿದ ಘಟನೆ ನಡೆದಿದೆ. ಕಡಿಮೆ ನೀರಿನಿಂದಾಗಿ ನೌಕೆ ದಡ ಮುಟ್ಟಲಾಗಿಲ್ಲ. ಬಳಿಕ ಅದರಲ್ಲಿದ್ದ 32 ಸ್ವಿಡ್ಜರ್ಲ್ಯಾಂಡ್ಸ್ ಪ್ರಯಾಣಿಕರನ್ನು ಇನ್ನೊಂದು ದೋಣಿಯ ಸಹಾಯದಿಂದ ದಡಕ್ಕೆ ಕರೆತರಲಾಗಿದೆ. ವಿಶ್ವದ ಅತಿದೊಡ್ಡ ನೌಕೆ ಬರಲಿದೆ ಎಂದು ತಿಳಿದ ಸಾವಿರಾರು ಜನರು ಛಾಪ್ರಾ ನದಿ ದಡದಲ್ಲಿ ಸೇರಿದ್ದರು. ಆದರೆ, ನೌಕೆ ದೂರದಲ್ಲೇ ಲಂಗರು ಹಾಕಿದೆ. ಬಳಿಕ ಡೋರಿ ಗಂಜ್‌ನ ಪುರಾತತ್ತ್ವ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆದೊಯ್ಯಲಾಯಿತು. ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಅತಿದೊಡ್ಡ ನೌಕೆ 51 ದಿನಗಳಲ್ಲಿ 3,200 ಕಿ.ಮೀ ಪಯಣಿಸಲಿದ್ದು, ಸುಲ್ತಾನ್‌ಪುರ, ಛಾಪ್ರಾ, ಪಾಟ್ನಾ, ಮುಂಗೇರ್ ಮತ್ತು ಭಾಗಲ್‌ಪುರ್, ಬಂಗಾಳದಿಂದ ವಾರಾಣಸಿ ಮತ್ತು ಘಾಜಿಪುರ ಮೂಲಕ ಬಾಂಗ್ಲಾದೇಶದ ದಿಬ್ರುಗಢಕ್ಕೆ ಸೇರಲಿದೆ. ಈ ಅವಧಿಯಲ್ಲಿ ವಿವಿಧ ನಗರಗಳಲ್ಲಿ 50 ಕಡೆ ನಿಲ್ಲಲಿದೆ. ಸುಮಾರು 2 ತಿಂಗಳ ಸುದೀರ್ಘ ಪ್ರಯಾಣದಲ್ಲಿ ಭಾರತ ಮತ್ತು ಬಾಂಗ್ಲಾದೇಶದ 27 ನದಿಗಳ ಮೂಲಕ ಇದು ಹಾದುಹೋಗಲಿದೆ.