ತೆಲಂಗಾಣ ಸಂಸ್ಥಾಪನಾ ದಿನ: ಗೋಲ್ಕೊಂಡ ಕೋಟೆಯಲ್ಲಿ ಕೇಂದ್ರ ಸಚಿವರಿಂದ ಧ್ವಜಾರೋಹಣ
ಹೈದರಾಬಾದ್ (ತೆಲಂಗಾಣ):ಕೇಂದ್ರ ಸರ್ಕಾರದ ಆಶ್ರಯದಲ್ಲಿ ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನಾಚರಣೆ ಹೈದರಾಬಾದ್‌ನ ಗೋಲ್ಕೊಂಡ ಕೋಟೆಯಲ್ಲಿ ಇಂದು ಅದ್ಧೂರಿಯಾಗಿ ಪ್ರಾರಂಭವಾಗಿದೆ. ಕೇಂದ್ರ ಸಂಸ್ಕೃತಿ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಉತ್ಸವಕ್ಕೆ ಸಂಸ್ಕೃತಿ ಖಾತೆ ಸಚಿವ ಜಿ.ಕಿಶನ್ ರೆಡ್ಡಿ ರಾಷ್ಟ್ರ ಧ್ವಜಾರೋಹಣ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಜಗತ್ತಿನಾದ್ಯಂತ ಇರುವ ಎಲ್ಲ ತೆಲುಗು ಜನರಿಗೆ ಶುಭಾಶಯ ತಿಳಿಸಿದರು.
ಪ್ರತ್ಯೇಕ ರಾಜ್ಯಕ್ಕಾಗಿ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು. ತೆಲಂಗಾಣ ಸಾಧನಾದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಶುಭ ಕೋರುತ್ತೇನೆ. ನೀರು, ನಿಧಿ, ನೇಮಕಾತಿಗಾಗಿ ಚಳವಳಿ ನಡೆಸಲಾಗಿತ್ತು ಎಂದು ರೆಡ್ಡಿ ಸ್ಮರಿಸಿದರು. ಇದೇ ಸಂದರ್ಭದಲ್ಲಿ ತೆಲಂಗಾಣಕ್ಕಾಗಿ ಮಡಿದವರನ್ನು ಸ್ಮರಿಸುವಂತೆ ಕರೆ ಕೊಟ್ಟರು.
ರಾಜ್ಯ ಒಬ್ಬಿಬ್ಬರ ಹೋರಾಟದಿಂದ ಸಿಕ್ಕಿರುವಂಥದ್ದಲ್ಲ. ಆಗ ವಿರೋಧ ಪಕ್ಷವಾಗಿದ್ದ ಬಿಜೆಪಿ ಬೆಂಬಲವೂ ಹೊಸ ರಾಜ್ಯ ಸ್ಥಾಪನೆಯ ಹಿಂದೆ ಇತ್ತು. ಈ ಮೂಲಕ ಜನರ ಆಶೋತ್ತರಗಳು ಈಡೇರುತ್ತವೆ ಎಂಬುದು ನಮ್ಮ ಪಕ್ಷದ ಉದ್ದೇಶ. ಆದರೆ, ಬಿಆರ್ಎಸ್ ಸರ್ಕಾರ ಹುತಾತ್ಮರ ಆಶಯದಂತೆ ಕೆಲಸ ಮಾಡುತ್ತಿಲ್ಲ ಎಂದು ಸಚಿವರು ದೂರಿದರು. ಕುಟುಂಬ ಆಡಳಿತದಿಂದ ರಾಜ್ಯದಲ್ಲಿ ಎಲ್ಲೆಲ್ಲೂ ಭ್ರಷ್ಟಾಚಾರ ಕಾಣುತ್ತಿದೆ. ಇಂದು ತೆಲಂಗಾಣ ಒಂದು ಕುಟುಂಬದ ಗುಲಾಮ ರಾಜ್ಯ ಎಂಬಂತಾಗಿದೆ ಎಂದು ಟೀಕಿಸಿದರು.
ಇದನ್ನೂ ಓದಿ:ತೆಲಂಗಾಣ ರಾಜ್ಯ ಸಂಸ್ಥಾಪನಾ ದಶಮಾನೋತ್ಸವ: 21 ದಿನಗಳ ಸಂಭ್ರಮಕ್ಕೆ ₹105 ಕೋಟಿ ಬಿಡುಗಡೆ