ಕಣ್ಣೀರು ಹಾಕಿ ಮತ ಯಾಚಿಸಿದ ಮಾಜಿ ಶಾಸಕ ರಮೇಶ್ ಬಾಬು; ಶಾಸಕ ರವೀಂದ್ರ ಶ್ರೀಕಂಠಯ್ಯ ವ್ಯಂಗ್ಯ
ಮಂಡ್ಯ:2023 ರ ವಿಧಾನಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಶ್ರೀರಂಗಪಟ್ಟಣದಲ್ಲಿ ಮಾಜಿ ಶಾಸಕರಿಂದ ಕಣ್ಣೀರು ರಾಜಕಾರಣ ಶುರುವಾಗಿದೆ. ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ರಮೇಶ್ ಬಾಬು ಕಣ್ಣೀರು ಹಾಕಿದ್ದಾರೆ. ಶ್ರೀರಂಗಪಟ್ಟಣದ ಬೆಳಗೊಳದಲ್ಲಿ ನಡೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವ ವೇಳೆ ಎಲ್ಲಾ ಕಷ್ಟಗಳು ತನಗೇ ಏಕೆ ಬರುತ್ತಿವೆ ಎಂದು ಕಣ್ಣೀರು ಹಾಕಿದರು.
ನಾನು ಜನ ಸೇವೆ ಮಾಡೋದೇ ತಪ್ಪಾ?. ಅಥವಾ ಭಾರ ಹೊರುತ್ತಾನೆ ಅಂತಾ ಇಂತಹ ಕಷ್ಟ ಕೊಡುವುದು ಸರಿಯಾ ಎಂದು ಸಭೆಯಲ್ಲಿ ಕಣ್ಣೀರು ಹಾಕುತ್ತಲೇ ಈ ಬಾರಿ ತಮ್ಮ ಕೈ ಹಿಡಿಯುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಮಾಜಿ ಶಾಸಕರ ಕಣ್ಣೀರಿಗೆ ಹಾಲಿ ಶಾಸಕ ವ್ಯಂಗ್ಯವಾಡಿದ್ದಾರೆ. ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ, ಅಭಿವೃದ್ಧಿಯ ಹೆಸರಲ್ಲಿ ಮತ ಕೇಳುವುದು ಬಿಟ್ಟು ಕಣ್ಣೀರು ಸುರಿಸಿ ಮತ ಕೇಳುವುದು ಶೋಭೆ ತರುವುದಿಲ್ಲ ಎಂದು ಟೀಕಿಸಿದ್ದಾರೆ. ಜನರು ನಮ್ಮನ್ನು ಆಯ್ಕೆ ಮಾಡುವುದು, ನಮಗೆ ಮತ ಹಾಕುವುದು ಕ್ಷೇತ್ರದ ಅಭಿವೃದ್ಧಿ ಮಾಡೋಕೆ ಕಣ್ಣೀರು ಹಾಕಲು ಅಲ್ಲವೆಂದು ಹೇಳಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಜಗಳ, ಇಬ್ಬರಿಗೆ ಗಾಯ: ವಿಡಿಯೋ ವೈರಲ್