ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಟ್ಟಲ್ಲಿ ಕ್ರಾಂತಿ: ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ - ಈಟಿವಿ ಭಾರತ ಕನ್ನಡ
Published : Dec 15, 2023, 9:58 PM IST
ದಾವಣಗೆರೆ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರಿನ ರಾಣಿ ಚೆನ್ನಮ್ಮರಂತಹ ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಬೇಕೆಂದು ಶಿಫಾರಸು ಮಾಡಿರುವುದು ಸ್ವಾಗತಾರ್ಹ. ಆದರೆ, ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ಕ್ರಾಂತಿ ಆಗಲಿದ್ದು, ಜನ ಸರ್ಕಾರದ ವಿರುದ್ಧ ರೊಚ್ಚಿಗೇಳುವುದು ಖಂಡಿತ ಎಂದು ಹೊನ್ನಾಳಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.
ಹೊನ್ನಾಳಿ ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ಮಾತನಾಡಿದ ಅವರು, ಮೈಸೂರು ರಾಜ ಮಹಾರಾಜರು ಆಳಿದಂತಹ ಪುಣ್ಯಭೂಮಿ. ಇಂತಹ ಪುಣ್ಯಭೂಮಿಯಲ್ಲಿರುವ ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ಸಿನ ಕೆಲವು ಮುಖಂಡರುಗಳು ಮತಾಂಧ ದೇಶದ್ರೋಹಿ, ಹಿಂದೂ ದೇವಾಲಯಗಳನ್ನು ನಿರ್ನಾಮ ಮಾಡಿದ ಟಿಪ್ಪುವಿನ ಹೆಸರಿಡಲು ಸೂಚಿಸಬಾರದು ಎಂದು ಹೇಳಿದರು.
ಹಿಂದೂಗಳನ್ನು ಮತಾಂತರ ಮಾಡಿದ ಟಿಪ್ಪುವಿನ ಹೆಸರು ವಿಮಾನ ನಿಲ್ದಾಣಕ್ಕೆ ನೇಮಕ ಮಾಡಿದರೆ ಬಿಜೆಪಿ ಪಕ್ಷದವರಲ್ಲ ಈ ರಾಜ್ಯದ ಜನ ಈ ನಿರ್ಧಾರದ ವಿರುದ್ಧ ರೊಚ್ಚಿಗೇಳಲಿದ್ದು, ಕ್ರಾಂತಿ ಆಗಲಿದೆ. ಅಲ್ಪಸಂಖ್ಯಾತರು ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ? ನಿಮಗೆಲ್ಲ ಅವರ ಮತಗಳೇ ಕಾಣೋದಾ? ಮಹಾರಾಜರು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ? ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಟ್ಟರೆ ತಕ್ಷಣವೇ ಹೋರಾಟಕ್ಕಿಳಿಯುತ್ತೇವೆ ಎಂದು ಗುಡುಗಿದರು.
ಇದನ್ನೂ ಓದಿ:ಬಿಜೆಪಿಗೆ ರಾಜಕೀಯ ಮುಖ್ಯವೇ ಹೊರತು ಜನರ ಸಮಸ್ಯೆ, ರಾಜ್ಯದ ಅಭಿವೃದ್ಧಿಯಲ್ಲ: ಡಿ.ಕೆ.ಶಿವಕುಮಾರ್