ದತ್ತ ಜಯಂತಿ: ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿದ ಸಿ.ಟಿ.ರವಿ - ಭಿಕ್ಷಾಟನೆ ಮಾಡಿದ ಮಾಜಿ ಸಚಿವ ಸಿಟಿ ರವಿ
Published : Dec 25, 2023, 5:52 PM IST
ಚಿಕ್ಕಮಗಳೂರು: ದತ್ತ ಜಯಂತಿ ಹಿನ್ನೆಲೆಯಲ್ಲಿ ಇಂದು ನಗರದ ನಾರಾಯಣಪುರ, ರಾಘವೇಂದ್ರ ಮಠದ ರಸ್ತೆ, ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಮನೆ ಮನೆಗೆ ತೆರಳಿ ಮಾಜಿ ಸಚಿವ ಹಾಗು ಬಿಜೆಪಿ ಮುಖಂಡ ಸಿ.ಟಿ.ರವಿ ನೇತೃತ್ವದಲ್ಲಿ ಭಿಕ್ಷಾಟನೆ ನಡೆಯಿತು. ಈ ಮೂಲಕ ಮಾಲಾಧಾರಿಗಳು ಪಡಿ ಸಂಗ್ರಹಿಸಿದರು. ಸ್ಥಳೀಯರು ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ, ವೀಳ್ಯದೆಲೆ, ಅಡಿಕೆ ಮತ್ತು ಬೆಲ್ಲ ನೀಡಿದರು.
ಇನಾಂ ದತ್ತಾತ್ರೇಯ ಪೀಠದಲ್ಲಿ ನಾಳೆ ಅದ್ಧೂರಿ ದತ್ತ ಜಯಂತಿ ಜರುಗಲಿದೆ. ಇರುಮುಡಿ ರೂಪದಲ್ಲಿ ಮಾಲಾಧಾರಿಗಳು ಇದನ್ನು ಸ್ವಾಮಿಗೆ ಅರ್ಪಿಸಲಿದ್ದಾರೆ. ಬೃಹತ್ ಶೋಭಾಯಾತ್ರೆ ನಡೆಯಲಿರುವುದರಿಂದ ಪೊಲೀಸರು ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ.
ಭಿಕ್ಷಾಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. "ಶಿವಾನಂದ ಪಾಟೀಲ್ ಹಿರಿಯರು. ಸರ್ಕಾರದಲ್ಲಿ ಬಹಳ ವರ್ಷ ಕೆಲಸ ಮಾಡಿದ ಅನುಭವಿ. ಅವರ ಬಾಯಲ್ಲಿ ಬರುವ ಇಂತಹ ಮಾತು ಸಹನೀಯವಲ್ಲ. ರೈತರು ಬರದಿಂದ ಸಾಯುತ್ತಾರೆ ಅನ್ನೋದು ರೈತ ಸಮುದಾಯಕ್ಕೆ ಅಪಮಾನ. ಮಣ್ಣನ್ನೇ ಪೂಜಿಸಿ, ಮಣ್ಣಲ್ಲೇ ಬೆರೆತು, ಜಗತ್ತಿಗೆ ಆಹಾರ ಹಂಚುವವರು ರೈತರು. ಬರಕ್ಕೆ ಕಾದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅನ್ನೋದು ಅವರಿಗೆ ಮಾಡಿದ ಅಪಮಾನ. ಇದು ಸರ್ಕಾರದ ಅಹಂಕಾರದ ಒಂದು ಭಾವನೆ" ಎಂದು ಟೀಕಿಸಿದರು.