ಸೊರಬದಲ್ಲಿ ಸಹೋದರರ ಸವಾಲ್.. ಯಾರಿಗೆ ವಿಜಯ ಮಾಲೆ? - karnataka elections
ಸೊರಬ ಅಂದ್ರೆ ತಕ್ಷಣ ನೆನಪಾಗುವುದು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ. ಬಂಗಾರಪ್ಪ ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿಗಳಲ್ಲಿ ಒಬ್ಬರು. ಇವರು ಯಾವ ಪಕ್ಷದಲ್ಲಿ ಇರುತ್ತಾರೂ ಆ ಪಕ್ಷ ಜಯಭೇರಿ ಬಾರಿಸುತ್ತದೆ ಎಂಬಂತೆ ಇದ್ದರು. ಸದ್ಯ ಸೊರಬ ಕ್ಷೇತ್ರದಲ್ಲಿ ಬಂಗಾರಪ್ಪರ ಇಬ್ಬರು ಮಕ್ಕಳು ಪೈಪೋಟಿಯ ರಾಜಕಾರಣ ಮಾಡುತ್ತಿದ್ದಾರೆ.
ಪುತ್ರರಾದ ಕುಮಾರ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಕಳೆದ ಐದು ಚುನಾವಣೆಗಳಿಂದ ಎದುರಾಳಿಗಳಾಗುತ್ತಿದ್ದಾರೆ. ಎಸ್.ಬಂಗಾರಪ್ಪ ರಾಷ್ಟ್ರೀಯ ರಾಜಕೀಯದ ಕಡೆ ಮುಖ ಮಾಡಿದಾಗ ತಮ್ಮ ಹಿರಿಯ ಮಗ ಕುಮಾರ ಬಂಗಾರಪ್ಪರನ್ನು ಸೊರಬ ಕ್ಷೇತ್ರದಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ತಂದರು. ಕುಮಾರ 1999ರಲ್ಲಿ ಸೊರಬದಲ್ಲಿ ಪ್ರಥಮ ಭಾರಿ ರಾಜಕೀಯ ಕಣಕ್ಕೆ ಎಂಟ್ರಿಕೊಟ್ಟರು.
ತಂದೆಯ ಆಶೀರ್ವಾದದಿಂದ ಕುಮಾರ ಬಂಗಾರಪ್ಪ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದರು. ಬಳಿಕ ಬಂಗಾರಪ್ಪ ಕುಟುಂಬದಲ್ಲಿ ಬಿರುಕು ಉಂಟಾಗಿ ಅಣ್ಣ - ತಮ್ಮ ಬೇರೆ ಬೇರೆ ಆದರು. 2004ರ ಹೊತ್ತಿಗೆ ಬಂಗಾರಪ್ಪನವರು ಬಿಜೆಪಿ ಸೇರ್ಪಡೆಗೊಂಡರು. ಆಗ ಮೊದಲ ಬಾರಿಗೆ ಮಧು ಬಂಗಾರಪ್ಪ ರಾಜಕೀಯಕ್ಕೆ ಎಂಟ್ರಿ ಕೊಟ್ಟು ತಮ್ಮ ಸಹೋದರನ ವಿರುದ್ಧವೇ ಸೋಲು ಅನುಭವಿಸಿದರು.
ಇದುವರೆಗೂ ಸಹೋದರರಿಬ್ಬರು ಐದು ಭಾರಿ ಎದುರಾಳಿಗಳಾಗಿದ್ದಾರೆ. ಮಧು ಬಂಗಾರಪ್ಪ 2013ರಲ್ಲಿ ಒಮ್ಮೆ ಮಾತ್ರ ಗೆಲುವು ಕಂಡಿದ್ದಾರೆ. ಕುಟುಂಬದಲ್ಲಿ ಕುಮಾರ ಬಂಗಾರಪ್ಪ ಒಂದು ಕಡೆ ಆಗಿದ್ರೆ, ಬಂಗಾರಪ್ಪನವರ ಹೆಣ್ಣು ಮಕ್ಕಳು ಮಧು ಬಂಗಾರಪ್ಪನವರ ಕಡೆ ಇದ್ದಾರೆ. ಕುಮಾರ ಬಂಗಾರಪ್ಪ 1999ರಿಂದ 2013ರ ತನಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. 2018ರಲ್ಲಿ ಬಿಜೆಪಿ ಸೇರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈಗ ಕುಮಾರ ಬಂಗಾರಪ್ಪ ಎರಡನೇ ಸಲ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು, ಎದುರಾಳಿಯಾಗಿ ಕಾಂಗ್ರೆಸ್ನಿಂದ ಮಧು ಕಣಕ್ಕಿಳಿದಿರುವುದು ಕದನ ಕುತೂಹಲ ಕೆರಳಿಸಿದೆ.