ಚಾಮರಾಜನಗರ: ಶಾಲೆಗೆ ಅರಣ್ಯ ಇಲಾಖೆ ಕಣ್ಗಾವಲು - ವಿದ್ಯಾರ್ಥಿಗಳಿಗೆ ಫಾರೆಸ್ಟ್ ಸಿಬ್ಬಂದಿ ಬಿಗಿ ಭದ್ರತೆ
ಚಾಮರಾಜನಗರ : ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರಿ ಶಾಲೆ ಮೇಲೆ ಕಣ್ಗಾವಲು ಇಡುವ ಜೊತೆಗೆ ವಿದ್ಯಾರ್ಥಿಗಳಿಗೆ ಬಿಗಿ ಭದ್ರತೆ ಒದಗಿಸುತ್ತಿರುವ ಘಟನೆ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿಯಲ್ಲಿ ನಡೆದಿದೆ. ಕಳೆದ ಜುಲೈ 25ರಂದು ಹರ್ಷಿತ್ (9) ಎಂಬಾತನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ ಪರಿಣಾಮ ಉಳಿದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಭಯ ಪಡುತ್ತಿದ್ದರು. ಈ ಹಿನ್ನೆಲೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ.
ಗ್ರಾಮದ ಪ್ರಾಥಮಿಕ ಶಾಲೆ ಮುಂಭಾಗದಿಂದ ಮನೆಗೆ ತೆರಳುವಾಗ ಅವಿತು ಕುಳಿತಿದ್ದ ಚಿರತೆ ಬಾಲಕನ ಮೇಲೆ ದಾಳಿ ಮಾಡಿತ್ತು. ಇದನ್ನು ಕಂಡ ಜನರು ಕಿರುಚಾಡಿದಾಗ ಬೆದರಿದ ಚಿರತೆ ಬಾಲಕನನ್ನು ಬಿಟ್ಟು ಓಡಿತ್ತು. ಹರ್ಷಿತ್ನ ಮುಖ, ಗಂಟಲು, ಕಾಲು, ಹೊಟ್ಟೆಯ ಭಾಗಕ್ಕೆ ಚಿರತೆ ಗೀರಿ ಕಚ್ಚಿ ಗಾಯಗೊಳಿಸಿತ್ತು. ಬಳಿಕ ಬಾಲಕನಿಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಮಕ್ಕಳ ಭಯ ಹೋಗಲಾಡಿಸಲು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಮಕ್ಕಳನ್ನು ಅರಣ್ಯ ಸಿಬ್ಬಂದಿ ಕರೆದೊಯ್ಯುತ್ತಿದ್ದಾರೆ. ಗ್ರಾಮದಲ್ಲೇ ಕ್ಯಾಂಪ್ ಮಾಡಿದ್ದು, ಶಾಲಾ ಗೇಟ್ ಬಳಿ ಕಾವಲು ನಿಲ್ಲುತ್ತಿದ್ದಾರೆ. ಜೊತೆಗೆ, ಚಿರತೆ ಸೆರೆಗೂ ನಿರಂತರ ಕಾರ್ಯಾಚರಣೆ ಕೈಗೊಂಡಿದ್ದು, 5-6 ಗ್ರಾಮಗಳಲ್ಲಿ ಬೋನ್ ಇಡಲಾಗಿದೆ.
ಇದನ್ನೂ ಓದಿ:ಚಾಮರಾಜನಗರ: 9 ವರ್ಷದ ಬಾಲಕನ ಮೇಲೆ ಚಿರತೆ ದಾಳಿ