ಅರಣ್ಯಭೂಮಿ ಒತ್ತುವರಿ ತೆರವು ವೇಳೆ ಜೆಸಿಬಿಗಳ ಮೇಲೆ ಕಲ್ಲು ತೂರಾಟ - ಈಟಿವಿ ಭಾರತ ಕನ್ನಡ
Published : Sep 9, 2023, 10:00 PM IST
ಕೋಲಾರ:ಅರಣ್ಯಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಜೆಸಿಬಿಗಳ ಮೇಲೆ ಒತ್ತುವರಿದಾರರು ಕಲ್ಲು ತೂರಾಟ ನಡೆಸಿದ್ದಾರೆ. ಕೋಲಾರ ಜಿಲ್ಲಾದ್ಯಂತ ಅರಣ್ಯ ಇಲಾಖೆ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ತೆರವು ಕಾರ್ಯಾಚರಣೆಗೆ ಜನರಿಂದ ವಿರೋಧ ವ್ಯಕ್ತವಾಗಿದೆ. ಅದರಂತೆ ಇಂದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ನಾರಮಾಕಲಪಲ್ಲಿ ಗ್ರಾಮದ ಬಳಿ ನಡೆಯುತ್ತಿದ್ದ ಕಾರ್ಯಾಚರಣೆ ಸ್ಥಳಕ್ಕೆ ಸಂಸದ ಎಸ್.ಮುನಿಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದಾರೆ. ಇನ್ನು ಇದೇ ವೇಳೆ ಒತ್ತುವರಿದಾರರು ಸಂಸದರ ಮುಂದೆಯೇ ಐದು ಜೆಸಿಬಿಗಳ ಮೇಲೆ ಕಲ್ಲು ತೂರಾಟ ಮಾಡಿದ್ದು, ಜೆಸಿಬಿಗಳ ಗಾಜುಗಳು ಪುಡಿಯಾಗಿವೆ.
ಇನ್ನು ಕಳೆದ ಹತ್ತು ದಿನಗಳಿಂದ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಬಹುತೇಕ ಪ್ರಭಾವಿಗಳೇ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಪೈಕಿ ಕೆಲ ಸಣ್ಣ ರೈತರು ಬೆಳೆದಿರುವ ಟೊಮ್ಯಾಟೊ ಕ್ಯಾಪ್ಸಿಕಂ ಸೇರಿದಂತೆ ಮಾವು ನಾಶವಾಗಿದ್ದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಕಾಲಾವಕಾಶ ಕೊಡಬೇಕಾಗಿತ್ತು ಎಂದು ರೈತರ ಪರ ಸಂಸದ ಬ್ಯಾಟ್ ಬೀಸಿದ್ದಾರೆ. ಕಳೆದ ಹತ್ತು ದಿನಗಳಿಂದ ನ್ಯಾಯಾಲಯದ ಆದೇಶದ ಮೇರೆಗೆ ಕೋಲಾರ ಜಿಲ್ಲಾದ್ಯಂತ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.