ಕಾರವಾರ: ಹತ್ತಾರು ಎಕರೆ ಅರಣ್ಯ ಅಗ್ನಿಗಾಹುತಿ - ಬಿಣಗಾ ಸಮೀಪದ ಅರಣ್ಯ ಪ್ರದೇಶ
ಕಾರವಾರ:ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ನಗರದ ಬಿಣಗಾ ಸಮೀಪದ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿ ಹತ್ತಾರು ಎಕರೆ ಅರಣ್ಯ ನಾಶವಾಗಿದೆ. ರಾಮನಗರ ಅರಣ್ಯ ಪ್ರದೇಶದಲ್ಲಿ ಭಾನುವಾರ ಸಂಜೆ ವೇಳೆಗೆ ಕಾಣಿಸಿಕೊಂಡ ಬೆಂಕಿ ರಾತ್ರಿ ವೇಳೆ ಹತ್ತಾರು ಎಕರೆ ಪ್ರದೇಶಕ್ಕೆ ವ್ಯಾಪಿಸಿತು. ವಿಷಯ ತಿಳಿದ ಅಗ್ನಿಶಾಮಕ, ಅರಣ್ಯ ಇಲಾಖೆ ಸಿಬ್ಬಂದಿ ಹಾಗು ನೌಕಾ ದಳದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗುಡ್ಡದ ತಳಭಾಗದಲ್ಲಿ ಕಾರ್ಯಾಚರಣೆ ಕೈಗೊಂಡರು. ಆದರೆ ನೌಕಾ ನೆಲೆಯ ಭಾಗದಲ್ಲಿ ಬೆಂಕಿಯ ಪ್ರಮಾಣ ಹೆಚ್ಚಾಗಿದೆ.
ಮುಂಜಾಗೃತ ಕ್ರಮವಾಗಿ ನೌಕಾ ನೆಲೆಯ ಬಿಣಗಾ ದ್ವಾರದಲ್ಲಿ ಅಗ್ನಿಶಾಮಕ ದಳವನ್ನು ನಿಯೋಜಿಸಲಾಗಿದೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ, ಡಿಎಫ್ಓ ಪ್ರಶಾಂತ್ ಆಗಮಿಸಿ ಪರಿಶೀಲನೆ ನಡೆಸಿದರು. ಕೆನ್ನಾಲಿಗೆ ಮತ್ತಷ್ಟು ವ್ಯಾಪಿಸುತ್ತಿದ್ದು, ಗುಡ್ಡದ ಭಾಗಕ್ಕೆ ತೆರಳಲು ಸಾಧ್ಯವಾಗದ ಕಾರಣ ಮುಂಜಾನೆಯವರೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಅಗತ್ಯ ಬಿದ್ದಲ್ಲಿ ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಇದನ್ನೂ ಓದಿ:ಹುಬ್ಬಳ್ಳಿ ವಿಮಾನ ನಿಲ್ದಾಣ ಆವರಣದಲ್ಲಿ ಬೆಂಕಿ: ಮರಗಳು ಅಗ್ನಿಗಾಹುತಿ