ಕುಡಿದ ಮತ್ತಿನಲ್ಲಿ ಆನೆ ಕಾಲಿಗೆ ಬಿದ್ದ ವ್ಯಕ್ತಿ: 10 ಸಾವಿರ ದಂಡ ವಿಧಿಸಿದ ಅರಣ್ಯ ಇಲಾಖೆ - ವಿಡಿಯೋ ವೈರಲ್ - 10 ಸಾವಿರ ರೂಪಾಯಿ ದಂಡ
ಧರ್ಮಪುರಿ(ತಮಿಳುನಾಡು): ಧರ್ಮಪುರಿ ಜಿಲ್ಲೆಯ ಪೆನ್ನಾಗರಂ ಪಕ್ಕದ ಹೊಗೇನಕಲ್ ರಸ್ತೆಯಲ್ಲಿ ಕಾಡಾನೆಯೊಂದು ನಿಂತಿದ್ದು, ಇದನ್ನು ಕಂಡು ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಆನೆಯತ್ತ ತೆರಳಿ, ಕಣ್ಣು ಮುಚ್ಚಿ ಆನೆಗೆ ಪೂಜೆ ಸಲ್ಲಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೂಜೆ ಸಲ್ಲಿಸುತ್ತಿರುವುದನ್ನು ಕಂಡ ಕಾಡಾನೆ ಸ್ವಲ್ಪ ಹಿಂದೆ ಸರಿದು ಕಾಡಿಗೆ ಹೋಗಲು ಪ್ರಯತ್ನಿಸಿದೆ. ಆದರೆ ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ಆನೆಯನ್ನು ಮುಂದೆ ಹೋಗಲು ಬಿಡದೇ ಆನೆಯ ಕಡೆಗೆ ನಡೆದುಕೊಂಡು ಹೋಗಿ, ಮತ್ತೆ ಆನೆಯ ಕಾಲಿಗೆ ಬಿದ್ದಿದ್ದಾನೆ.
ನಂತರ ತನ್ನೆರಡು ಕೈಗಳನ್ನು ಮೇಲೆತ್ತಿ ಆನೆಗೆ ಶರಣಾಗಿರುವಂತೆ ಪೋಸ್ ನೀಡಿದ್ದಾನೆ. ಇದನ್ನು ನೋಡಿದ ಸುತ್ತಮುತ್ತಲಿನವರು ಜೋರಾಗಿ ಆನೆ ಬಳಿ ಹೋಗಬೇಡಿ ಎಂದು ಕೂಗಿದರೂ, ಅದ್ಯಾವುದಕ್ಕೂ ಕಿವಿಗೊಡದ ವ್ಯಕ್ತಿ ಆನೆಗೆ ನಮಸ್ಕರಿಸುವುದು, ಕಾಲಿಗೆ ಬೀಳುವುದನ್ನು ಮಾಡುತ್ತಲೇ ಇದ್ದನು. ನಂತರ ಅಲ್ಲಿಂದ ತನ್ನ ವಾಹನದತ್ತ ಆ ವ್ಯಕ್ತಿ ವಾಪಸ್ ಆಗಿದ್ದಾನೆ. ಅಲ್ಲೇ ಕಾರಿನಲ್ಲಿ ಹೋಗುತ್ತಿದ್ದವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈಗ ಆ ವಿಡಿಯೋ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಕಾಡಾನೆಗಳು ಮನುಷ್ಯರನ್ನು ಓಡಿಸುವುದು ಅಥವಾ ದಾಳಿ ಮಾಡುವುದು ಮಾಡುತ್ತವೆ. ಆದರೆ, ಈ ಆನೆ ಮಾತ್ರ ಕುಡಿದ ಅಮಲಿನಲ್ಲಿ ಆ ವ್ಯಕ್ತಿ ಅಷ್ಟೆಲ್ಲ ಮಾಡುತ್ತಿದ್ದರೂ ಏನೂ ಹಾನಿ ಮಾಡಿಲ್ಲ. ಆದರೆ, ಈ ರೀತಿ ಕಾಡಾನೆಗಳಿಗೆ ಕಿರುಕುಳ ನೀಡುವುದು ಶಿಕ್ಷಾರ್ಹ ಅಪರಾಧ ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಇದೇ ವೇಳೆ, ಕಾಡಾನೆಗೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದ್ದು, 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಇದನ್ನೂ ನೋಡಿ:ಕಾಡಿಗೆ ಬಿಟ್ಟರೂ ಮರಳಿ ನಾಡಿಗೆ ಬರ್ತಿದೆ ಮರಿಯಾನೆ: ಸುಳ್ಯದಲ್ಲಿ ಅರಣ್ಯ ಇಲಾಖೆಗೆ ಫಜೀತಿ- ವಿಡಿಯೋ