ಕಡಬದಲ್ಲಿ ಕಾಡುತ್ತಿದೆ ಕಾಡ್ಗಿಚ್ಚು.. ವನ್ಯ ಪ್ರಾಣಿಗಳ ಪರದಾಟ - ಅಗ್ನಿಶಾಮಕ ಸಿಬ್ಬಂದಿ
ಕಡಬ/ದಕ್ಷಿಣ ಕನ್ನಡ :ಜಿಲ್ಲೆಯಲ್ಲಿ ತಾಪಮಾನ ಅತ್ಯಧಿಕ ಏರಿಕೆ ಕಂಡಿದ್ದು, ಈ ಉಷ್ಣಾಂಶದಿಂದಾಗಿ ಜಿಲ್ಲೆಯಲ್ಲಿ ಕಾಡ್ಗಿಚ್ಚು ವ್ಯಾಪಕವಾಗಿ ಹರಡುತ್ತಿದೆ. ಕಡಬ ತಾಲೂಕಿನ ಕ್ಯೊಲ ಫಾರ್ಮ್ ಸಂಪೂರ್ಣ ಹೊತ್ತಿ ಉರಿದು ನಂತರದಲ್ಲಿ ಇದೀಗ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಹತ್ಯಡ್ಕ, ಉದ್ಯಾರ ಹಾಗೂ ಶಿಬಾಜೆ, ಪೆರ್ಲ, ಕಡ್ಯ, ಪುತ್ಯೆ, ಒಡ್ಡಾಯ, ಕೊಣಾಜೆ ಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಡ್ಗಿಚ್ಚು ಪಸರಿಸಿದೆ.
ಬೀಸುತ್ತಿರುವ ಗಾಳಿಗೆ ಅತೀ ವೇಗದಿಂದ ಬೆಂಕಿಯು ಪಸರಿಸುತ್ತಿದ್ದು, ನೋಡು ನೋಡುತ್ತಿದ್ದಂತೆಯೇ ಗಿಡಮರಗಳ ಸಮೂಹವೇ ಅಗ್ನಿಗಾಹುತಿಯಾಗುತ್ತಿದೆ. ಸರಿಸೃಪಗಳು, ಮೊಲಗಳು, ಮುಳ್ಳುಹಂದಿ ಸೇರಿದಂತೆ ಸಣ್ಣ ಕಾಡು ಪ್ರಾಣಿಗಳು ಬೆಂಕಿಯ ಕೆನ್ನಾಲಿಗೆಗೆ ಅಗ್ನಿಗಾಹುತಿಯಾಗುತ್ತಿದ್ದರೆ, ಜಿಂಕೆ, ಕಡವೆ, ಕಾಡುಹಂದಿಗಳು ಸೇರಿದಂತೆ ಕಾಡು ಪ್ರಾಣಿಗಳು ದಿಕ್ಕುದೆಸೆಯಿಲ್ಲದೆ ಪರದಾಡುವಂತಾಗಿದೆ.
ಈ ಮಧ್ಯೆ ಅರಣ್ಯ ಇಲಾಖಾಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಬೆಂಕಿ ಶಮನಗೊಳಿಸಲು ಶಕ್ತಿ ಮೀರಿ ಶ್ರಮಪಡುತ್ತಿದ್ದಾರೆ. ಈಗಾಗಲೇ ಕಾಡ್ಗಿಚ್ಚು ಕಾಣಿಸಿಕೊಂಡ ಕಾಡಿನಲ್ಲಿ ಕಾಡಾನೆಗಳ ಸಂಚಾರವಿದ್ದು, ಕಾಡ್ಗಿಚ್ಚಿನ ಕಾವಿನಿಂದಾಗಿ ಕಾಡಿನೊಳಗಿನ ಪ್ರಾಣಿಗಳು ಎಲ್ಲೆಂದರಲ್ಲಿ ಓಡಿ ತಪ್ಪಿಸಿಕೊಳ್ಳುವ ಯತ್ನದ ನಡುವೆ ಜನರಿಗೂ ತೊಂದರೆ ನೀಡುವ ಸಾಧ್ಯತೆ ಇದೆ. ಸದ್ಯ ಹಲವು ಕಡೆಗಳಲ್ಲಿ ಬೆಂಕಿ ಹತೋಟಿಗೆ ಬಂದರೂ ಹಗಲು ಹೊತ್ತಿನಲ್ಲಿ ಬೀಸುವ ಬಿಸಿ ಗಾಳಿಗೆ ಇನ್ನೂ ಬೆಂಕಿ ಹೊತ್ತಿಕೊಳ್ಳುವ ಸಂಭವ ಇದೆ. ಈ ನಡುವೆ ಕೆಲವು ಕಡೆಗಳಲ್ಲಿ ಕೆಲವು ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಾಕುತ್ತಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿದೆ.
ಇದನ್ನೂ ಓದಿ :ಬಂಡೀಪುರ ಕಾಡಿನಲ್ಲಿ ಬೆಂಕಿ: ಧಗಧಗಿಸುತ್ತಿದೆ ಎಕರೆಗಟ್ಟಲೇ ಭೂಮಿ