ಹಾಸನಾಂಬೆಗೆ ಹರಿದು ಬಂತು ವಿದೇಶಿ ನೋಟು, ಚಿನ್ನಾಭರಣ - ದೇವಿಗೆ ಹರಕೆ
Published : Nov 16, 2023, 7:00 PM IST
ಹಾಸನ : ಇತಿಹಾಸ ಬರೆದಿರುವ ಹಾಸನಾಂಬ ದೇವಾಲಯದ ಹುಂಡಿ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು, ಶುಕ್ರವಾರ(ನ.17) ಮಧ್ಯಾಹ್ನದ ಒಳಗೆ ಎಣಿಕೆ ಕಾರ್ಯ ಮುಗಿಯುವ ಸಾಧ್ಯತೆ ಇದೆ. ಪ್ರತಿವರ್ಷ ಹುಂಡಿ ಎಣಿಕೆ ಕಾರ್ಯ ವಿಳಂಬವಾಗುತ್ತಿರುವ ಹಿನ್ನೆಲೆ ಈ ವರ್ಷ ಮತ್ತಷ್ಟು ಎಣಿಕೆ ಕಾರ್ಯಕ್ಕೆ ಸಿಬ್ಬಂದಿಯನ್ನು ಬಳಸಿಕೊಳ್ಳುವ ಮೂಲಕ ಪ್ರಾರಂಭಿಸಿರುವ ಜಿಲ್ಲಾಡಳಿತಕ್ಕೆ ಬ್ಯಾಂಕ್ ಸಿಬ್ಬಂದಿ ಕೂಡ ಸಾಥ್ ನೀಡಿದ್ದಾರೆ.
12 ದಿನಗಳ ಸಾರ್ವಜನಿಕ ದರ್ಶನ ನೀಡಿದ ಹಾಸನಾಂಬೆಗೆ ಈ ಬಾರಿ ಸುಮಾರು 13 ಲಕ್ಷ ಮಂದಿ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಈಗಾಗಲೇ ಆರು ಕೋಟಿಗೂ ಹೆಚ್ಚು ಟಿಕೆಟ್ ಮತ್ತು ಲಾಡು ಪ್ರಸಾದ ಮಾರಾಟದಿಂದ ಆದಾಯ ಗಳಿಸಿದ ಹಾಸನಾಂಬೆಗೆ ಗುರುವಾರದಿಂದ (ನ.16) ಹುಂಡಿ ಎಣಿಕೆ ಕಾರ್ಯ ಪ್ರಾರಂಭವಾಗಿದೆ.
ಸುಮಾರು 16ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳ ಮೂಲಕ 400 ಸಿಬ್ಬಂದಿಗೂ ಹೆಚ್ಚು ಮಾನವ ಸಂಪನ್ಮೂಲ ಬಳಸಿಕೊಂಡು ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿಯೂ ಹುಂಡಿಯಲ್ಲಿ ಕೋಟಿಗಟ್ಟಲೆ ಆದಾಯ ಬರುವ ನಿರೀಕ್ಷೆಯನ್ನು ಹೊಂದಲಾಗಿದೆ. ಎಣಿಕೆ ಕಾರ್ಯದಲ್ಲೇ 80 ಲಕ್ಷಕ್ಕೂ ಅಧಿಕ ಆದಾಯ ಬಂದಿರುವ ಹಾಸನಾಂಬೆಗೆ ಕೇವಲ ಭಾರತದ ಕರೆನ್ಸಿ ಮಾತ್ರವಲ್ಲದೆ ವಿದೇಶಿಯ ಕರೆನ್ಸಿಗಳು ಕೂಡ ಬಂದಿರುವುದು ವಿಶೇಷ. ಇದರ ಜೊತೆಗೆ ಚಿನ್ನ ಬೆಳ್ಳಿ ಸೇರಿದಂತೆ ವಿವಿಧ ಆಭರಣಗಳು ಕೂಡ ದೇವಿಗೆ ಹರಕೆ ರೂಪದಲ್ಲಿ ನೀಡಿರುವುದರಿಂದ ಹಾಸನಾಂಬೆಗೆ ಈ ಬಾರಿ ಆದಾಯದಲ್ಲಿ ದಾಖಲೆಯಾಗಿದೆ.
ಇದನ್ನೂ ಓದಿ :ಶಕ್ತಿದೇವತೆ ಹಾಸನಾಂಬೆಯ ದರ್ಶನ ಸಂಪನ್ನ: 6 ಕೋಟಿಗೂ ಅಧಿಕ ಆದಾಯ ಸಂಗ್ರಹ